ಸಾರಾಂಶ
ಕನ್ನಡಪ್ರಭ ಸಿನಿವಾರ್ತೆ ಬೆಂಗಳೂರು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ''''ಬಿಗ್‌ಬಾಸ್ ಸೀಸನ್ 10''''ಗೆ ಅಂತಿಮ ತೆರೆ ಬಿದ್ದಿದೆ. ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ರೋಚಕವಾಗಿ ಅಂತಿಮ ಹಣಾಹಣಿ ನಡೆಯಿತು.
ಇದರಲ್ಲಿ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಕಾರ್ತಿಕ್ ಮಹೇಶ್ ಬಿಗ್‌ಬಾಸ್ ಸೀಸನ್ 10ನ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಕಾರ್ತಿಕ್ ಬಹುಮಾನವಾಗಿ ₹50 ಲಕ್ಷ ನಗದು, ಮಾರುತಿ ಸುಜುಕಿ ಬ್ರೆಜಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಂಡಿದ್ದಾರೆ. ಡ್ರೋನ್ ಪ್ರತಾಪ್‌ಗೆ ₹10 ಲಕ್ಷ, ಪ್ರೈಝ್ ಮನಿ ಜೊತೆಗೆ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಲಭಿಸಿದೆ.
2ನೇ ರನ್ನರ್‌ಅಪ್ ಆದ ಸಂಗೀತಾ ₹7 ಲಕ್ಷ ಪಡೆದುಕೊಂಡಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ಫಿನಾಲೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ವಿವಿಧ ವಿನೋದಾವಳಿಗಳ ಜೊತೆಗೆ ಸ್ಪರ್ಧಿಗಳ ಎಲಿಮಿನೇಶನ್, ವಿಜೇತರು ಯಾರಾಗುತ್ತಾರೆ ಎಂಬ ಕುತೂಹಲ ಕ್ಷಣ ಕ್ಷಣವೂ ಗರಿಗೆದರುವಂತಿತ್ತು.
ಜನರ ಓಟಿಂಗ್ ಮೇಲೆ ನಿರ್ಣಾಯಕ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಈ ವೇಳೆ ಅಧಿಕೃತವಾಗಿ ಘೋಷಿಸಲಾಯಿತು. 2023ರ ಅ.8ರಂದು ಆರಂಭವಾದ ಬಿಗ್‌ಬಾಸ್ ಸೀಸನ್-10ರಲ್ಲಿ 17 ಸ್ಪರ್ಧಿಗಳು ಭಾಗವಹಿಸಿದ್ದರು.
ಸುದೀಪ್‌ಗೆ ಅಭಿನಂದನೆ:
ಬಿಗ್‌ಬಾಸ್ ಫಿನಾಲೆಯಲ್ಲಿ ಸುದೀಪ್ ಅವರ ಹತ್ತು ಕಟೌಟ್‌ಗಳ ಮಧ್ಯೆ ಸುದೀಪ್ ಅವರನ್ನು ನಿಲ್ಲಿಸಿ ಬಿಗ್‌ಬಾಸ್ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ''''ಬಿಗ್‌ಬಾಸ್ ಆರಂಭವಾಗಿ ೧೦ ವರ್ಷಗಳಾಗಿವೆ.
ಅನೇಕ ಬದಲಾವಣೆಗಳಾಗಿವೆ. ಆದರೆ ಬದಲಾಗದೇ ಉಳಿದದ್ದು ಸುದೀಪ್ ಮಾತ್ರ. ಅವರೇ ಈ ಬಿಗ್‌ಬಾಸ್‌ನ ಶಕ್ತಿ'''' ಎಂದು ಕಲರ್ಸ್ ಕನ್ನಡ ವತಿಯಿಂದ ಅವರನ್ನು ಅಭಿನಂದಿಸಲಾಯ್ತು.
ಇದೊಂದು ಭಾವುಕ ಕ್ಷಣವಾಗಿತ್ತು. ಅಂತಿಮ ಕ್ಷಣದವರೆಗೂ ವಿಜೇತರ ಬಗ್ಗೆ ಗೊಂದಲವಿತ್ತು. ಹಿಂದಿನ ದಿನದವರೆಗೂ ಸಂಗೀತಾ ಗೆಲ್ಲುತ್ತಾರೆ ಎಂದೇ ನಂಬಲಾಗಿತ್ತು.
ಆದರೆ ಫಿನಾಲೆಗೂ ಕಾರ್ತಿಕ್ ಮಹೇಶ್ ಗೆಲುವನ್ನು ಮೈಸೂರಿನಲ್ಲಿ ಅವರ ಅಭಿಮಾನಿಗಳು ಹಿಂದಿನ ದಿನವೇ ಸಂಭ್ರಮಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲೂ ಕಾರ್ತಿಕ್ ಅವರೇ ವಿನ್ನರ್ ಎಂಬ ಸುದ್ದಿ ಹರಿದಾಡುತ್ತಿತ್ತು. ಬಿಗ್‌ಬಾಸ್ ಮನೆಯಲ್ಲಿ ಲವರ್ ಬಾಯ್ ಆಗಿ ಕಾರ್ತಿಕ್ ಗುರುತಿಸಿಕೊಂಡಿದ್ದರು. ಮನರಂಜನೆ ನೀಡುವ ಜೊತೆಗೆ ಆಟಗಳ ಮೂಲಕವೂ ಗುರುತಿಸಿಕೊಂಡಿದ್ದರು.
ಮೂರನೇ ರನ್ನರ್ ಅಪ್ ಅಂದರೆ ನಾಲ್ಕನೇ ಸ್ಥಾನದಲ್ಲಿರುವವರಿಗೆ ₹೫ ಲಕ್ಷ ಕ್ಯಾಶ್‌ಪ್ರೈಸ್ ನೀಡಲಾಗಿದೆ. ವಿನಯ್ ಈ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಐದನೇ ಹಾಗೂ ಆರನೇ ಸ್ಥಾನದಲ್ಲಿದ್ದವರು ತಮಾಷೆ ಜೋಡಿ ಎಂದೇ ಖ್ಯಾತರಾದ ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತು. ಇವರಲ್ಲಿ ತುಕಾಲಿ ಸಂತು ಬಿಗ್‌ಬಾಸ್ ಫಿನಾಲೆಗೂ ಒಂದು ದಿನ ಮೊದಲೇ ಮನೆಯಿಂದ ನಿರ್ಗಮಿಸಿದರು.
ವರ್ತೂರು ಸಂತೋಷ್ ಐದನೇ ಸ್ಥಾನದಲ್ಲಿ ಉಳಿದುಕೊಂಡು ಫಿನಾಲೆಯ ಹಂತದವರೆಗೆ ಬಂದರು. ಈ ಜೋಡಿ ₹2 ಲಕ್ಷ ಬಹುಮಾನ ವಿಜೇತವಾಯಿತು. ಆರನೇ ಸ್ಫರ್ಧಿಗೂ ಈ ಮೊತ್ತದ ಹಣ ಸಿಗುತ್ತಿರುವುದು ಕನ್ನಡ ಬಿಗ್‌ಬಾಸ್ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.