ಕೆಡಿ ಆಡಿಯೋ ಹಕ್ಕು ರೂ.17.70 ಕೋಟಿಗೆ ಮಾರಾಟ

| Published : May 29 2024, 12:45 AM IST

ಸಾರಾಂಶ

ಕೆಡಿ ಚಿತ್ರದ ಆಡಿಯೋ ಹಕ್ಕುಗಳು ರೂ 17.70 ಕೋಟಿಗೆ ಮಾರಾಟ ಆಗಿದ್ದು, ಇದೊಂದು ದಾಖಲೆಯ ಬೆಲೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

‘ನಮ್ಮ ‘ಕೆಡಿ’ ಚಿತ್ರದ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್‌ ಆಗಿರುವುದನ್ನು ತಿಳಿದು ಸಲ್ಮಾನ್‌ ಖಾನ್‌ ವಿಶ್ ಮಾಡಿದ್ದಾರೆ ಎಂದು ಸಲ್ಮಾನ್‌ ಖಾನ್‌ ಅವರ ಮ್ಯಾನೇಜರ್‌ ತಿಳಿಸಿದ್ದಾರೆ. ಇದು ನಮ್ಮ ಚಿತ್ರದ ಆಡಿಯೋ ಕ್ರೇಜ್‌.’

- ಹೀಗೆ ಹೇಳಿದ್ದು ನಿರ್ದೇಶಕ ಪ್ರೇಮ್‌. ಧ್ರುವ ಸರ್ಜಾ ನಟನೆಯ, ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ ‘ಕೆಡಿ’ ಚಿತ್ರದ ಆಡಿಯೋ ಹಕ್ಕುಗಳು ರು.17.70 ಕೋಟಿಗೆ ಆನಂದ್‌ ಆಡಿಯೋಗೆ ಮಾರಾಟ ಆಗಿದೆ.

ಪ್ರೇಮ್‌, ‘ಕೆಡಿ ಚಿತ್ರಕ್ಕೆ ಇಲ್ಲಿವರೆಗೂ 150 ದಿನ ಶೂಟಿಂಗ್‌ ಆಗಿದೆ. ಇನ್ನೊಂದು ವಾರದ ಮಾತಿನ ಭಾಗ ಹಾಗೂ 3 ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ನೈಜ ಘಟನೆ ಆಧಾರಿತ ಈ ಚಿತ್ರಕ್ಕೆ 20 ಎಕರೆ ಜಾಗದಲ್ಲಿ ಸೆಟ್ ಹಾಕಿದ್ದೇವೆ. ಚಿತ್ರದಲ್ಲಿ 6 ಹಾಡುಗಳಿವೆ. 256 ಪೀಸ್ ಆರ್ಕೆಸ್ಟ್ರಾ ಬಳಸಲಾಗಿದೆ. ಹಾಡುಗಳಿಗೆ ಖರ್ಚು ಮಾಡಿದ ಬಜೆಟ್‌ನಲ್ಲಿ ಮತ್ತೊಂದು ಸಿನಿಮಾ ಮಾಡಬಹುದು. ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಗಸ್ಟ್ 16ರಂದು ಮುಂಬೈನಲ್ಲಿ ಚಿತ್ರದ ಟೀಸರ್, ಆ 24ರಂದು ಚಿತ್ರದ ಮೊದಲ ಹಾಡನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದರು.

ಧ್ರುವ ಸರ್ಜಾ, ‘ಇದು 70 -75ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕತೆ. ಇಡೀ ಬೆಂಗಳೂರನ್ನೇ ಕೆಲವರು ಆಕ್ರಮಿಸಿದ್ದರು. ಅವರು ಯಾರು, ಅವರ ಕತೆ ಏನೆಂಬುದು ಚಿತ್ರದಲ್ಲಿದೆ’ ಎಂದರು. ಕೆವಿಎನ್‌ ಪ್ರೊಡಕ್ಷನ್‌ನ ಸುಪ್ರೀತ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಆನಂದ್ ಆಡಿಯೋ ಶ್ಯಾಮ್ ಇದ್ದರು.