ನಿತ್ಯ ಬದುಕಿನ ಒಳ ಸುಳಿಗಳ ನೋಟದಲ್ಲಿ ಸಾಗುವ ಸಹದೇವ್‌ ಕೆಲವಡಿ ನಿರ್ದೇಶನದ ಕೆಂಡ ಸಿನಿಮಾ

| Published : Jul 27 2024, 12:46 AM IST / Updated: Jul 27 2024, 06:32 AM IST

ಸಾರಾಂಶ

ಸಹದೇವ್‌ ಕೆಲವಡಿ ನಿರ್ದೇಶನದ ಕೆಂಡ ಸಿನಿಮಾ ಹೇಗಿದೆ ಎನ್ನುವ ಕುತೂಹಲ ಇದ್ದವರು ಓದಿ.

ಚಿತ್ರ : ಕೆಂಡ

ತಾರಾಗಣ : ಬಿ ವಿ ಭರತ್‌, ರೇಖಾ ಕೂಡ್ಲಿಗಿ, ವಿನೋದ್‌ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್, ಬಿಂದು ರಕ್ಷಿದಿ, ದೀಪ್ತಿ ನಾಗೇಂದ್ರ

ನಿರ್ದೇಶನ : ಸಹದೇವ್ ಕೆಲವಡಿ

ಆರ್‌.ಕೆ

1. ಮೊದಲು ಆತ...

ಅದು ಗ್ಯಾರೇಜ್‌. ಅಲ್ಲಿ ತಣ್ಣಗೆ ಕಬ್ಬಿಣ ಸುಡುತ್ತಿದೆ. ಬೆಂಕಿ ಮತ್ತು ಸಮಸ್ಯೆಗಳ ಸದ್ದುಗಳನ್ನು ಹೊತ್ತು ಬದುಕಿನ ತೇರು ಎಳೆಯುತ್ತಿದ್ದವನನ್ನು ಸದ್ದೇ ಮಾಡದ ವೈಟ್‌ ಕಾಲರ್‌ ಕ್ರೈಮ್‌ ಲೋಕ ಕೈ ಬೀಸಿ ಕರೆಯುತ್ತದೆ.

2. ನಂತರ ಆತ...

ರಾಜಕೀಯ, ಕ್ರಾಂತಿ, ಪತ್ರಿಕೋದ್ಯಮ, ಹೋರಾಟ, ಸುದ್ದಿಗಳ ಸಂತೆಯಲ್ಲಿ ಮುಳುಗಿದ್ದಾನೆ. ದೊಡ್ಡಸ್ಥಿಕೆಯ ಮುಖವಾಡ ಹೊತ್ತವರ ಬೆನ್ನಿಗೆ ನಿಂತಿರುವ ಆತ, ಕಾನೂನು ಬಾಹಿರ ಕೃತ್ಯಗಳಲ್ಲಿ ಕುಖ್ಯಾತಿ ಪಡೆದುಕೊಳ್ಳುತ್ತಾನೆ.

3. ಆ ದೊಡ್ಡವರು...

ಆತ ಪತ್ರಿಕಾ ಸಂಪಾದಕ. ವಿಚಾರ- ಸಿದ್ದಾಂತ, ಸಮಾಜಿಕ ಬದಲಾವಣೆ, ಕ್ರಾಂತಿ ಎಂದು ಮಾತನಾಡುವ ವ್ಯಕ್ತಿ. ಆದರೆ, ಈ ವಿಚಾರವಾದಿ ಪತ್ರಕರ್ತನ ಬಲಗೈಯಲ್ಲಿರೋದು ಅಧಿಕಾರಕ್ಕಾಗಿ ಕಾಯುತ್ತಿರುವ ರಾಜಕೀಯ ಹಿತಾಸಕ್ತಿಯ ವ್ಯಕ್ತಿ.

4. ಆಕೆ...

ಟೀವಿ ಪತ್ರಕರ್ತೆ. ತಾನು ಸುದ್ದಿ ಮಾಡುತ್ತಿರುವ ಘಟನೆಗಳ ಹಿಂದೆ ಮತ್ತೊಂದು ಮುಖ ಇರಬಹುದೆಂಬ ಅನುಮಾನ ಹೊತ್ತು, ತನಿಖೆಗೆ ಇಳಿಯುತ್ತಾಳೆ.

5. ಹೆಣ್ಣಲ್ಲದ ಹೆಣ್ಣು...

ರಂಗು ರಂಗಿನ ಪುಟ್ಟ ಕೊಠಡಿ. ಅಲ್ಲೊಬ್ಬಳು ಇದ್ದಾಳೆ. ಆಕೆ ಯಾರು?

ಕಾರ್ಖಾನೆಯ ಕಾರ್ಮಿಕ, ಇಬ್ಬರು ಸಾಮಾದ ಗಣ್ಯರು, ವರದಿಗಾರ್ತಿ, ಹಾದಿ ತಪ್ಪಿದ ಯುವಕರ ಗುಂಪು... ಇವಿಷ್ಟು ತಿರುವುಗಳಲ್ಲಿ ನಿರ್ದೇಶಕ ಸಹದೇವ ಕಲವಡಿ ಅವರು ‘ಕೆಂಡ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಆಡಂಬರಕ್ಕೆ ಮಾರು ದೂರ, ಕಾಲ್ಪನಿಕತೆಯ ನೆರಳಿನಿಂದ ಆಚೆ ನಿಂತು ಚಿತ್ರದ ಪ್ರತಿ ದೃಶ್ಯವನ್ನೂ ನೈಜವಾಗಿ ಸಂಯೋಜಿಸುತ್ತಾ ರೂಪಿಸಿರುವ ಪ್ರಯೋಗಾತ್ಮಕ ಈ ಸಿನಿಮಾ, ನಿತ್ಯ ಬದುಕಿನ ಒಳ ಸುಳಿಗಳ ಬಿಸಿ ನೋಟಗಳನ್ನು ತೆರೆದಿಡುತ್ತದೆ.

ಇದು ಒಂದು ಸಾಲಿನಲ್ಲಿ ಹೇಳುವ ಕತೆಗಿಂತ ಸಿನಿಮಾ ನೋಡ ಬಯಸುವ ಪ್ರೇಕ್ಷಕನ ನೋಟಕ್ಕೆ ದಕ್ಕುವ ಅನುಭವ ಮತ್ತು ಬುದ್ಧಿವಂತಿಕೆಗೆ ಸವಾಲು ಒಡ್ಡುವ ಸಿನಿಮಾ ಎನ್ನಬಹುದು.