ಸಾರಾಂಶ
ಕನ್ನಡಪ್ರಭ ಸಿನಿವಾರ್ತೆ
ಜನಪ್ರಿಯ ಸಾಹಿತಿ, ಗೀತರಚನಕಾರ ಜಯಂತ ಕಾಯ್ಕಿಣಿ ಪುತ್ರ ಋತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಸಹದೇವ್ ಕೆಲ್ವಾಡಿ ನಿರ್ದೇಶನದ ‘ಕೆಂಡ’ ಚಿತ್ರಕ್ಕೆ ರಿತ್ವಿಕ್ ಸಂಗೀತ ನೀಡಿದ್ದಾರೆ. ಈ ಸಿನಿಮಾದ ‘ತಾಜಾ ತಾಜಾ ಸುದ್ದಿ’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.
ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಈ ಹಾಡು ಬಿಡುಗಡೆ ಮಾಡಿ, ‘ಯಾವ ಪ್ರಭಾವಗಳೂ ಇಲ್ಲದ ತಾಜಾ ಹಾಡಿದು’ ಎಂದು ಹೊಗಳಿದರು.
ನಿರ್ದೇಶಕ ಯೋಗರಾಜ್ ಭಟ್, ‘ಕೋವಿಡ್ ಬಳಿಕ ಚಿತ್ರರಂಗಕ್ಕೆ ಬರುತ್ತಿರುವ ಹೊಸಬರಲ್ಲಿ ನಮ್ಮ ಹಾಡಿಂದ ದೊಡ್ಡ ಅಲೆಯೇ ಎದ್ದು ಬಿಡುತ್ತೆ ಎಂಬ ಭ್ರಮೆ ಇದೆ. ಅವರು ಊಹಿಸಿದ ಪ್ರತಿಕ್ರಿಯೆ ಬರದೇ ಹೋದಾಗ ಹತಾಶ ಸ್ಥಿತಿಗೆ ತಲುಪುತ್ತಾರೆ.
ಈ ಎರಡು ಡೇಂಜರ್‌ಗಳ ನಡುವೆಯೇ ಕ್ರಿಯೇಟಿವಿಟಿ ಹುಟ್ಟುವುದು. ಈ ಟೆನ್ಶನ್ ಈ ಕಾಲದ ಹುಡುಗರನ್ನು ಹೆಚ್ಚೆಚ್ಚು ಕಾಡಲಿ’ ಎಂದರು.
ಜಯಂತ ಕಾಯ್ಕಿಣಿ, ‘ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬರುವ ನೆಂಟರಿಗೆ ಮಾಡುವ ಗಡಿಬಿಡಿಯ ಕಚ್ಚಾ ಅಡುಗೆಯಲ್ಲಿ ಅದ್ಭುತ ರುಚಿ ಇರುತ್ತದೆ. ಆ ಥರದ ಸಿನಿಮಾವಿದು. ಹೊಸ ತಲೆಮಾರಿನ ಮಿನಿಮಲ್ ಎಕ್ಸ್‌ಪ್ರೆಶನ್ ಹಾಡಿನಲ್ಲೂ ಬಂದಿದೆ’ ಎಂದರು.
ರಿತ್ವಿಕ್ ಕಾಯ್ಕಿಣಿ, ‘ಪಾಲಿಶ್ ಮಾಡದ ಕಚ್ಚಾತನದ ಜೊತೆಗೆ ಪ್ರಾಮಾಣಿಕ ನಿರೂಪಣೆ ಚಿತ್ರದ ಹಾಡಿನ ಶಕ್ತಿ. ತಂದೆ ಮತ್ತು ನಾನು ಇಬ್ಬರು ವಿಭಿನ್ನ ವ್ಯಕ್ತಿಗಳು ಎಂಬ ಭಾವದಲ್ಲಿ ಈ ಹಾಡಿನಲ್ಲಿ ತೊಡಗಿಸಿಕೊಂಡೆವು. ಹೀಗಾಗಿ ತಂದೆ, ಮಗನ ಸಂಬಂಧ ಇಲ್ಲಿ ಅಡ್ಡಬರಲಿಲ್ಲ’ ಎಂದರು.
ನಿರ್ಮಾಪಕಿ ರೂಪಾ ರಾವ್, ‘ಕಲ್ಲು ಹೊಡೆದು ಮಜಾ ನೋಡೋ ಪುಡಿ ರೌಡಿಯಂಥಾ ಕಥೆ ಕೆಂಡ ಸಿನಿಮಾದ್ದು’ ಎಂದರು. ನಿರ್ದೇಶಕ ಸಹದೇವ ಕೆಲ್ವಾಡಿ, ‘ತಾಜಾ ಸುದ್ದಿ ಹಾಡು ಸಿನಿಮಾದಲ್ಲಿ ಒಂದು ಮೂಡ್ ಅನ್ನು ಹಿಡಿದಿಡುತ್ತದೆ’ ಅಂದರು.
ನಿರ್ಮಾಪಕಿ ಶೈಲಜಾನಾಗ್, ‘ಸಿನಿಮಾ ಒಂದು ವ್ಯಾಪಾರ. ಅದು ಶೋಕಿಯಲ್ಲ’ ಎಂದು ಅಭಿಪ್ರಾಯಪಟ್ಟರು. ಡಿಬೀಟ್ಸ್‌ಮ್ಯೂಸಿಕ್ ವರ್ಲ್ಡ್ ಯೂಟ್ಯೂಬ್‌ನಲ್ಲಿ ಈ ಹಾಡು ನೋಡಬಹುದು.