ಆ 15ಕ್ಕೆ ಕೃಷ್ಣಂ ಪ್ರಣಯ ಸಖಿ ತೆರೆಗೆ

| Published : Aug 14 2024, 12:49 AM IST

ಸಾರಾಂಶ

ಆಗಸ್ಟ್ 15ಕ್ಕೆ ಕೃಷ್ಣಂ ಪ್ರಣಯ ಸಖಿ ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಯಿತು.

ಕನ್ನಡಪ್ರಭ ಸಿನಿವಾರ್ತೆ

ಗಣೇಶ್‌ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ ಆಗಸ್ಟ್‌ 15ಕ್ಕೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ ಅನ್ನು ಅದ್ಧೂರಿಯಾಗಿ ನಡೆಸಲಾಯಿತು. ಶ್ರೀನಿವಾಸರಾಜು ನಿರ್ದೇಶಿಸಿ, ಪ್ರಶಾಂತ್‌ ಜಿ ರುದ್ರಪ್ಪ ನಿರ್ಮಾಣದ ಚಿತ್ರ‍ವಿದು. ಗಣೇಶ್‌, ‘ನನ್ನ ಕೆರಿಯರ್‌ನ ಮತ್ತೊಂದು ದೊಡ್ಡ ಬಜೆಟ್ಟಿನ ಸಿನಿಮಾ ಇದು. ಒಂದೆರಡು ವರ್ಷಗಳಿಂದ ಕನ್ನಡದಲ್ಲಿ ಯಾವುದೇ ಹಿಟ್‌ ಹಾಡು ಇಲ್ಲ. ನಮ್ಮ ಚಿತ್ರದ ಹಾಡುಗಳು ಹಿಟ್‌ ಆಗಿವೆ. ಹೊರ ದೇಶಗಳಲ್ಲೂ ಚಿತ್ರದ ಹಾಡುಗಳಿಗೆ ರೀಲ್ಸ್‌ ಮಾಡಿದ್ದಾರೆ. ತುಂಬಾ ಖುಷಿ ಆಗುತ್ತಿದೆ. ಟೀಸರ್‌ ಹಾಗೂ ಟ್ರೇಲರ್‌ಗಿಂತ ನಾನು ಹಾಡುಗಳಲ್ಲೇ ಚಿತ್ರವನ್ನು ತಲುಪಿಸುತ್ತೇನೆ ಎಂದು ನಿರ್ದೇಶಕರು ಹೇಳಿದ್ದರು. ಆ ಮಾತನ್ನು ಉಳಿಸಿಕೊಂಡಿದ್ದಾರೆ. 45ಕ್ಕೂ ಹೆಚ್ಚು ಮಂದಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ’ ಎಂದರು.

ನಿರ್ದೇಶಕ ಶ್ರೀನಿವಾಸರಾಜು, ಚಿತ್ರದಲ್ಲಿ ನಟಿಸಿರುವ ಮಾಳವಿಕ ನಾಯರ್‌, ಶರಣ್ಯ ಶೆಟ್ಟಿ, ರಂಗಾಯಣ ರಘು, ಶಶಿಕುಮಾರ್‌ ಹಾಗೂ ಚಿತ್ರ ಸಾಹಿತಿ ಡಾ ವಿ ನಾಗೇಂದ್ರ ಪ್ರಸಾದ್, ನಿರ್ಮಾಪಕ ಪ್ರಶಾಂತ್‌ ಜಿ ರುದ್ರಪ್ಪ ಮುಂತಾದವರು ಹಾಜರಿದ್ದು ಚಿತ್ರದ ಬಗ್ಗೆ ಮಾತನಾಡಿದರು. ಸದ್ಯಕ್ಕೆ ವೈರಲ್‌ ಆಗಿರುವ ‘ದ್ವಾಪರ’ಹಾಡಿಗೆ ಧ್ವನಿಯಾಗಿರುವ ಪಂಜಾಬ್‌ ಮೂಲದ ಗಾಯಕ ಜಸ್ಕರಣ್‌ ಸಿಂಗ್‌ ಅವರು ಅತಿಥಿಯಾಗಿ ಬಂದಿದ್ದರು. ಇಡೀ ತಂಡ ಚಿತ್ರದ ಹಾಡಿಗೆ ವೇದಿಕೆ ಮೇಲೆ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.