ಸಾರಾಂಶ
ಲೇಡೀಸ್ ಬಾರ್ ಸಿನಿಮಾ ವಿಮರ್ಶೆ: ಬೆಂಗಳೂರು ಮಹಾನಗರದಲ್ಲಿ ಒಂದು ‘ಲೇಡೀಸ್ ಬಾರ್’ ಓಪನ್ ಆಗುತ್ತೆ. ಇಲ್ಲಿ ಹೆಣ್ಮಕ್ಕಳ ನೋವು, ಒಂಟಿತನಕ್ಕೆ ಗುಂಡು, ತುಂಡು ಮುಲಾಮಿನಂತೆ ಕೆಲಸ ಮಾಡುತ್ತಿರುತ್ತದೆ. ಇದು ಮಧ್ಯ ವಯಸ್ಸಿನ ಸಂಸಾರಸ್ಥ ಮಹಿಳೆಯ ಬದುಕಿನ ಮೇಲೆ ಬೀರುವ ಪರಿಣಾಮವೇನು?
ಲೇಡೀಸ್ ಬಾರ್
ತಾರಾಗಣ: ಎಸ್ ಎನ್ ರಾಜಶೇಖರ್, ಟಿ ಎಂ ಸೋಮರಾಜ್, ಚಿತ್ರಾ ಗೌಡ, ಹರೀಶ್ ರಾಜ್ನಿರ್ದೇಶನ: ಮುತ್ತು ಎ ಎನ್‌ಪೀಕೆಸಂಪ್ರದಾಯ, ಸಂಸ್ಕೃತಿ ಹೆಣ್ಣಿಗೆ ಮಾತ್ರ ಸೀಮಿತವಾ? ಹೆಣ್ಣು ಕುಡಿದರೆ ಮಾತ್ರ ಸಮಾಜ ಹಾಳಾಗೋದಾ? ನೋವಲ್ಲಿ ಗಂಡು ಕುಡಿದರೆ ನೋಡಿಯೂ ನೋಡದಂತಿರುವ ಸಮಾಜ, ಅವನಿಗಿಂತ ಹೆಚ್ಚು ನೋವಲ್ಲಿರುವ ಹೆಣ್ಣು ಕುಡಿದಾಗ ಟ್ರೋಲ್ ಮಾಡಿ ನಗುವುದು ಯಾಕೆ? ಇದರ ಹಿಂದಿನ ಕ್ರೌರ್ಯ ಏನು? ಇತ್ಯಾದಿ ಪ್ರಶ್ನೆಗಳನ್ನು ಹುಟ್ಟು ಹಾಕುವ ಸಿನಿಮಾ ಲೇಡೀಸ್ ಬಾರ್.ಬೆಂಗಳೂರು ಮಹಾನಗರದಲ್ಲಿ ಒಂದು ‘ಲೇಡೀಸ್ ಬಾರ್’ ಓಪನ್ ಆಗುತ್ತೆ. ಇಲ್ಲಿ ಹೆಣ್ಮಕ್ಕಳ ನೋವು, ಒಂಟಿತನಕ್ಕೆ ಗುಂಡು, ತುಂಡು ಮುಲಾಮಿನಂತೆ ಕೆಲಸ ಮಾಡುತ್ತಿರುತ್ತದೆ. ಬಾರ್ ಅಂದಮೇಲೆ ಸಣ್ಣ ಪುಟ್ಟ ಕಿರಿಕ್ಕು, ಗಲಾಟೆ ಇದ್ದದ್ದೇ. ಈ ನಡುವೆ ಟಿವಿ ಹುಡುಗಿಯೊಬ್ಬಳು ಸ್ಟಿಂಗ್ ಆಪರೇಶನ್ ನೆವದಲ್ಲಿ ಕದ್ದುಮುಚ್ಚಿ ಇಲ್ಲಿನ ದೃಶ್ಯಗಳನ್ನು ಸೆರೆ ಹಿಡಿದಾಗ ಎದುರಾಗುವ ಸಮಸ್ಯೆ ಏನು? ಇದು ಮಧ್ಯ ವಯಸ್ಸಿನ ಸಂಸಾರಸ್ಥ ಮಹಿಳೆಯ ಬದುಕಿನ ಮೇಲೆ ಬೀರುವ ಪರಿಣಾಮವೇನು? ಸುದ್ದಿ ಪ್ರಸಾರದ ನೆವದಲ್ಲಿ ಮಾಧ್ಯಮಗಳು ಎಷ್ಟು ಅಮಾನವೀಯವಾಗಿ ವರ್ತಿಸುತ್ತಿವೆ ಎಂಬ ಅಂಶವನ್ನು ಸಿನಿಮಾ ಪ್ರೇಕ್ಷಕರ ಮುಂದಿಡುತ್ತದೆ. ಕೊನೆಯಲ್ಲಿ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಎಷ್ಟೇ ಭಾಷಣಗಳಿವೆ. ಆದರೂ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವುದು ‘ಲೇಡೀಸ್ ಬಾರ್’ ಓನರ್ ಕೇಳುವ ಹೆಣ್ಣುಮಕ್ಕಳ ಪರವಾದ ಪ್ರಶ್ನೆಗಳು. ಈ ಚಿತ್ರದ ನಿರ್ಮಾಪಕ ಟಿ ಎಂ ಸೋಮಶೇಖರ್ ಇದ್ದಕ್ಕಿದ್ದಂತೆ ಹೀರೋ ಆಗಿ ಹೊರಹೊಮ್ಮುತ್ತಾರೆ. ಅವರ ಡ್ಯುಯೆಟ್ಟು, ಫೈಟ್ ಸೀನ್‌ಗಳು ನೀಡುವ ಮನರಂಜನೆ ಬೋನಸ್ಸು. ಒಂದು ಹಂತದಲ್ಲಿ ನಿರ್ಮಾಪಕರು, ಸಹ ನಿರ್ಮಾಪಕರು ಜೊತೆಯಾಗಿ ಫೈಟ್ ಮಾಡುವುದನ್ನು ನೋಡುವುದು ಮತ್ತೊಂದು ಮಜಾ. ಹೀಗೆ ಹೆಣ್ಮಕ್ಕಳ ಕಷ್ಟ ಸುಖಗಳ ಬಗ್ಗೆ ಮಾತನಾಡುತ್ತಲೇ ಇಂಥಾ ಮನರಂಜನೆಯನ್ನೂ ನೀಡುವುದು ಚಿತ್ರದ ಹೆಚ್ಚುಗಾರಿಕೆ.