ಸಾರಾಂಶ
- ಫಣಿಕುಮಾರ್.ಟಿ.ಎಸ್.ಮಹಾಭಾರತವನ್ನು ಬರೆದಾದ ಮೇಲೆ ವ್ಯಾಸರಿಗೆ ಅದೊಂದು ಬಗೆಯ ವಿಷಣ್ಣತೆ ಕಾಡುತ್ತಿತ್ತು. ಆ ಅಂತಃಕ್ಷೋಭೆಯನ್ನು ಮೀರಲು ವ್ಯಾಸರು ತಮ್ಮ ಮುಂದಿನ ಹಾಗೂ ಕಡೆಯ ಕೃತಿ ಭಾಗವತವನ್ನು ರಚಿಸಿದರು. ಲಕ್ಷ್ಮೀಶ ತೋಳ್ಪಾಡಿಯವರ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಪಡೆದ ಮಹಾಭಾರತ ಅನುಸಂಧಾನದ ‘ಭಾರತಯಾತ್ರೆ’ ಕೃತಿಯಲ್ಲಿ ದಾಖಲಾಗಿರುವ ಓದುಗನ ಜ್ಞಾನ- ಸಂವೇದನೆಯನ್ನು ಹಿಗ್ಗಿಸಿ ಅವನಲ್ಲಿ ಉತ್ಕೃಷ್ಟವಾದ ಭಾವನೆಯನ್ನು ತುಂಬುವ ಒಂದು ಸಾಲು ಇದು. ತೋಳ್ಪಾಡಿಯವರ ಈ ಲೇಖನಗಳೆಲ್ಲವೂ ಒಂದೇ ನಿನಾದದ ಹಲವು ಬಣ್ಣಗಳಾಗಿ ನಮ್ಮನ್ನು ಅಪರೂಪದ ಅನುಭವಗಳಿಗೆ ನಿಲುಕಿಸುತ್ತದೆ. ಈ ಮಹತ್ವದ ಕೃತಿಯ ಪ್ರತಿಯೊಂದು ಬರಹವೂ ಬಿಡಿಯಾದರೂ, ಅವೆಲ್ಲವೂ ಇಡಿಯ ಕ್ಷಣಗಳೇ ಆಗಿ ನಮ್ಮನ್ನು ತಣಿಸುತ್ತದೆ!ತೋಳ್ಪಾಡಿಯವರು ಇಲ್ಲಿಯವರೆಗಿನ ತಮ್ಮ ಸಾಹಿತ್ಯದಲ್ಲಿ ಬರೆದುದೆಲ್ಲವೂ ಓದುಗನ ಅಂತರಂಗವನ್ನು ಬೆಚ್ಚಗಾಗಿಸುವ ವಿಶಿಷ್ಟ ತನ್ಮಯ ಭಾವಗಳೇ ಆಗಿವೆ. ಉಪನಿಷತ್ತಿನ ಕುರಿತಂತೆ; ಭಾಗವತದ ಕುರಿತಂತೆ ಅವರು ಈವರೆಗೆ ಬರೆದಿರುವ ಎಲ್ಲಾ ಲೇಖನ-ಕೃತಿಗಳು ಕೂಡಾ ಹೀಗೆ ಮೌನದ ಮಡಿಲಿನಲ್ಲಿಯೇ ಮಿಡಿದ ಪಿಸುಮಾತುಗಳಾಗಿವೆ. ಅವರ ಎಲ್ಲ ಬರವಣಿಗೆಗಳಲ್ಲಿ ಮಾತನಾಡಲು ಮಾತಿನ ಅವಶ್ಯಕತೆಯನ್ನು ನಿರಾಕರಿಸುವ ಒಂದು ಮುಗ್ಧ ನಿರ್ಲಿಪ್ತತೆಯನ್ನು, ಒಂದು ಮೌನ ಕಳಕಳಿಯನ್ನು, ಒಂದು ಸೂಕ್ಷ್ಮ ಸಂವೇದನೆಯನ್ನು ನಾವು ಕಾಣಬಹುದು. ಅದು ಸಾಮಾಜಿಕ ಚಳವಳಿಗಳ ಪ್ರಭಾವಗಳನ್ನು ಮೀರಿದ ಒಂದು ದರ್ಶನ ಕ್ರಮವಾಗಿದೆ. ಇಲ್ಲಿಯೂ ಕೂಡಾ ಅವರು ಮಹಾಭಾರತವನ್ನು ಅಂತರಂಗದ ಇತಿಹಾಸವೆಂದು ಬಣ್ಣಿಸಿ, ಅದರ ಕುರಿತಂತೆ ಹೊಸದೊಂದು ಗ್ರಹಿಕೆಯ ಆಯಾಮವನ್ನೇ ಓದುಗರಿಗೆ ಸೃಷ್ಟಿಸಿಕೊಡುತ್ತಾರೆ. ಇದೇ ಕೃತಿಯ ಸಾವಿನ ಸಮ್ಮುಖದಲ್ಲಿ ಬದುಕಿನ ಅರಿವು-ಆಯ್ಕೆ ಎನ್ನುವ ಪ್ರಬಂಧದಲ್ಲಿ ತೋಳ್ಪಾಡಿಯವರು ಹೀಗೆ ಬರೆಯುತ್ತಾರೆ. ‘ಸಮಾಜದ ನಮ್ಮ ಸಾಮಾನ್ಯ ತಿಳಿವಳಿಕೆಯಲ್ಲಿ ಯಕ್ಷ ಪ್ರಶ್ನೆ ಎಂದರೆ ಅದು ಉತ್ತರವಿಲ್ಲದ ಪ್ರಶ್ನೆ ಎನ್ನುವ ಭಾವನೆಯೇ ಇದೆ. ಯಕ್ಷನಿಗೇ ತೃಪ್ತಿಯಾದರೂ ಜನಕ್ಕೆ ತೃಪ್ತಿಯಾಗಿಲ್ಲ! ಏಕೆಂದರೆ ಕಾಲಕಾಲಕ್ಕೆ ಪ್ರಶ್ನೆ ಉತ್ತರಗಳ ವಿನ್ಯಾಸ; ಮೊನಚು;ಅರ್ಥದ ಛಾಯೆಗಳು ಬದಲಾಗಬಹುದಲ್ಲವೇ? ಅಲ್ಲದೇ ಪ್ರಶ್ನೆಗೆ ಉತ್ತರವಿಲ್ಲವೆನ್ನುವುದೇ ಒಂದು ಆಕರ್ಷಣೆ!’ - ಈ ಚಿಂತನಾ ಕ್ರಮವು ನಾವು ತಿಳಿಗೊಳ್ಳಬಹುದಾದ ಎಲ್ಲ ಸಾಧ್ಯತೆಗಳನ್ನೂ ನಮಗೆ ಒದಗಿಸುವುದಲ್ಲದೇ ಎಲ್ಲ ಮಾನವ ಸಹಜ ವಿನ್ಯಾಸಗಳನ್ನು ಅದು ಸಹನೀಯವಾಗಿಸುತ್ತದೆ. ಪೂರ್ವದ ಅಧ್ಯಾತ್ಮಿಕತೆಯಲ್ಲಿ ಲಾವೊತ್ಸು ವಿಶಿಷ್ಟ ಸ್ಥಾನ ಹೊಂದಿದ್ದಾನೆ. ದ್ವಂದ್ವಗಳನ್ನ ಮೀರುವ ಹಾಗೆ, ಅವನ ಮಾತುಗಳು ಇವೆ. ಅದ್ವೈತ ಸಿದ್ಧಾಂತವನ್ನ ಬೆಂಬಲಿಸುವ ಹಾಗಿವೆ ಅವನ ಎಲ್ಲ ಬೋಧನೆಗಳು. ಅವನ ರಾಜ ಒಮ್ಮೆ ಅವನ ಆಶ್ರಮಕ್ಕೆ ಬಂದು ನಿನ್ನ ಸಂದೇಶ ಸಮಾಜವನ್ನು ತಲುಪಲಿ, ದಯವಿಟ್ಟು ನಿನ್ನ ಮಾತುಗಳನ್ನು ಪುಸ್ತಕರೂಪದಲ್ಲಿ ದಾಖಲಿಸು ಅಂದನಂತೆ. ಲಾವೊತ್ಸು, ಅವನ ಜೀವಿತ ಸಂದರ್ಭದಲ್ಲಿ ಅಂತಹ ಯಾವ ಪ್ರಚೋದನೆಗಳನ್ನೂ ಲೆಕ್ಕಿಸದೇ ತಾನಾಗಿಯೇ ಉಳಿದನಂತೆ. ತೋಳ್ಪಾಡಿಯವರು, ಇತರರಂತೆ ಬರೆದಿದ್ದರೆ ಅದೆಷ್ಟು ಆಗಿಹೋಗುತ್ತಿತ್ತೋ! ಹಾಗಾಗಿ ಅವರು ಬರೆದ ಯಾವುದರಲ್ಲೂ ಜೊಳ್ಳಿಲ್ಲ! ಬರೆದವೆಲ್ಲವೂ ಪೂರ್ವಾಗ್ರಹಗಳಿಲ್ಲದ ಅಪ್ಪಟ ಮಾನವೀಯ ತವಕಗಳು. ಕೃತಿಯಲ್ಲಿ ಮಹಾಭಾರತದ ಸಾಲುಗಳನ್ನು ಉದ್ಧರಿಸುತ್ತಾ ಅವರು ‘ಇಲ್ಲಿನ ದಿಗ್ಭ್ರಮೆಯ ಅನುಭವವಿಲ್ಲದೇ ಅಲ್ಲಿನ ಆಶ್ಚರ್ಯದ ಅನುಭವವಿಲ್ಲ; ಕಟ್ಟಿದ್ದು ಮುರಿದುಬಿದ್ದಾಗಲೇ ಇರುವುದರ ದರ್ಶನವಾಗುವುದು; ಅರ್ಜುನನ ವಿಷಾದವಿಲ್ಲದೇ ಕೃಷ್ಣನ ಗೀತೆಯಿಲ್ಲ; ಕಾಲವೆನ್ನುವುದು ಇತಿಹಾಸದ ಆಧ್ಯಾತ್ಮಿಕ ರೂಪ, ಇತಿಹಾಸವೆನ್ನುವುದು ಕಾಲದ ಲೌಕಿಕ ರೂಪ- ಮಹಾಭಾರತದಲ್ಲಿ ಕಾಲ, ಇತಿಹಾಸಗಳು ಪರಸ್ಪರ ಬೆರೆತುಬಿಟ್ಟಿವೆ’ ಎನ್ನುತ್ತಾರೆ. ಅಷ್ಟೇ ಅಲ್ಲ, ಜೀವಂತವಾದುದನ್ನು ನೋಡಿದಾಗಲೇ ಜೀವಿಗೆ ಸಾವಿನ ಅನುಭವವಾಗುವುದು! ಎನ್ನುವ ಸಾಲು ಅವರ ಮೂಲಕ ದಾವ್‌ನ ಹೊಸ ಸಾಧ್ಯತೆಯನ್ನು ಸಹ ನಮ್ಮ ಮುಂದಿರಿಸುತ್ತದೆ. ವ್ಯಾಸರನ್ನ ಪದೇಪದೇ ತೋಳ್ಪಾಡಿಯವರು ನಿಕಷಕ್ಕೆ ಒಡ್ಡುತ್ತಾರೆ. ‘ವ್ಯಾಸರ ಮನ ಬಾಲ್ಯದ, ಎಳೆತನದ, ಮುಗ್ಧತೆಯ ಮಹತ್ವವನ್ನು ತಿಳಿಯಪಡಿಸಬೇಕೆಂಬುದರಲ್ಲಿದೆ. ಸ್ವಯಂ ವ್ಯಾಸರಿಗೇ ಬಾಲ್ಯವಿರಲಿಲ್ಲ. ತಾಯಿಯ ವಾತ್ಸಲ್ಯದ ಒಡನಾಟವಿರಲಿಲ್ಲ. ಇದು ವ್ಯಾಸರನ್ನು ಆಳದಲ್ಲಿ ಕಾಡುತ್ತಿರಬೇಕು’ ಎಂದು ಹೇಳಿ ಜನಮೇಜಯನ ಸರ್ಪಯಾಗವನ್ನು ನಿಲ್ಲಿಸಿದ ಆಸ್ತೀಕನನ್ನು, ಯಮನ ಮುಂದೆ ನಿಂತು ನೀನು ಲೋಕದಲ್ಲಿ ಮನುಷ್ಯನಾಗಿ ಹುಟ್ಟೆಂದು ಶಪಿಸುವ ಮಾಂಡವ್ಯನನ್ನು ಪ್ರಸ್ತಾಪಿಸುತ್ತಾರೆ. ಮಾಂಡವ್ಯ, ಬಾಲ್ಯವನ್ನು ವಿಸ್ತರಿಸುವ ಅಭಿಮತವನ್ನು ಸ್ಥಾಪಿಸಿದವನು. ಅದುವರೆಗೆ ಹುಟ್ಟಿ ಹನ್ನೆರಡು ವರ್ಷಗಳ ತನಕ ಬಾಲ್ಯ ಎನ್ನುವ ಗಣನೆ ಇತ್ತು. ಮಾಂಡವ್ಯ ಆ ಗಣನೆಯನ್ನು ಒಪ್ಪದೇ ಹದಿನಾಲ್ಕು ವರ್ಷಗಳ ತನಕ ಬಾಲ್ಯವಿರಬೇಕೆಂದು ತಿದ್ದಿದನೆನ್ನುತ್ತಾರೆ.. ಸಂಸ್ಕೃತಿಗೆ ಬಾಲ್ಯವನ್ನು ದೀರ್ಘವಾಗಿಸುವ ಆಶಯ. ನಾಗರಿಕತೆಗೆ ಅದನ್ನು ಹ್ರಸ್ವವಾಗಿಸುವ ಆತುರವೆನ್ನುವ ಸಾಲು ಅತ್ಯಂತ ಪ್ರಬೋಧಕವಾಗಿದೆ. ಭಾರತದ ನೆಪದಲ್ಲಿ ತೋಳ್ಪಾಡಿಯವರು ಸಮಕಾಲೀನ ಸಂದರ್ಭಗಳನ್ನು ವಿಶಿಷ್ಟ ಒಳನೋಟಗಳ ಮೂಲಕ ನೋಡುತ್ತಾರೆ. ಅಂಬೇಡ್ಕರ್ ಅವರಿಗೆ ಭರತಪರಂಪರೆಯ ಕುರಿತಂತೆ ಏಕೆ ಆಸಕ್ತಿಯುಂಟಾಯಿತು ಎನ್ನುವುದನ್ನು ಅವರು ಹೀಗೆ ವಿವರಿಸಿದ್ದಾರೆ. ‘ಭರತ ಪರಂಪರೆಯೆನ್ನುವುದು ಜೈನ ಪರಂಪರೆಯಾಗಿದೆ. ಸುದಾಸನೆಂಬ ಭರತ ಪರಂಪರೆಗೆ ಸೇರಿದ ರಾಜ, ಅಶ್ವಮೇಧವನ್ನು ಮಾಡಿದ ದೊಡ್ಡ ಸಾಮ್ರಾಟನಾಗಿದ್ದ. ವಿಶ್ವಾಮಿತ್ರನಂತಹ ಪ್ರಚಂಡ ವ್ಯಕ್ತಿಯೇ ಸುದಾಸನಿಗೆ ಪುರೋಹಿತನಾಗಿದ್ದ. ಅವನ ತಂದೆ ದಿವೋದಾಸನು ಭರತಕುಲಕ್ಕೆ ಸೇರಿದವನು ಎಂದು ಅಂಬೇಡ್ಕರರೇ ಉಲ್ಲೇಖಿಸಿದ್ದಾರೆ. ಈ ಪೈಜವನ ಸುದಾಸನನ್ನು ಮಹಾಭಾರತ ಶೂದ್ರನೆಂದಿದೆ. ಹಾಗಾಗಿ ಅಂಬೇಡ್ಕರರು ಶೂದ್ರರು ಕ್ಷತ್ರಿಯರೇ ಆಗಿದ್ದರು. ಬ್ರಾಹ್ಮಣ-ಕ್ಷತ್ರಿಯರ ನಡುವಣ ಘರ್ಷಣೆ ತೀವ್ರವಾದಾಗ ಕ್ಷತ್ರಿಯ ಸಂಸ್ಕಾರದಿಂದಲೂ ಬಾಹ್ಯರಾಗಿ ಶೂದ್ರರಾಗಿ ಪರಿಣಮಿಸಿದರು ಎಂದು. ಬಹಳ ಮುಖ್ಯವಾಗಿ ಈ ದೇಶಕ್ಕೆ ಯಾರಿಂದ ಭಾರತವೆಂದು ಹೆಸರಾಯಿತೋ ಈ ಪರಂಪರೆಗೆ ನೇರವಾಗಿ ಸಂಬಂಧಿಸಿದ್ದು ಶೂದ್ರ ಸಮುದಾಯವೆಂದು ಅಂಬೇಡ್ಕರ್ ಎತ್ತಿತೋರಿಸುತ್ತಾರೆ ಎನ್ನುತ್ತಾರೆ. ನಿಜಕ್ಕೂ ಅಂಬೇಡ್ಕರರ ಈ ದೃಷ್ಟಿಕೋನ ಚೇತೋಹಾರಿಯಾದುದೇ ಆಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಂಬೇಡ್ಕರರು ಜೈನಧರ್ಮಕ್ಕೆ ಮತಾಂತರಗೊಳ್ಳುವುದು ಹೆಚ್ಚು ತರ್ಕಬದ್ಧವಾಗುತ್ತಿತ್ತು. ಆದರೆ ಜೈನ ತತ್ವಚಿಂತನೆಯಲ್ಲಿ ಸಹಮತ ಏರ್ಪಡದೇ ಅವರು ಬೌದ್ಧಧರ್ಮದತ್ತ ಒಲಿದರು ಎನಿಸುತ್ತದೆ ಎನ್ನುವ ಅಂಶವನ್ನೂ ತೋಳ್ಪಾಡಿಯವರು ದಾಖಲಿಸಿ ಒಂದು ಬೌದ್ಧಿಕ ಗೊಂದಲಕ್ಕೂ ತೆರೆಎಳೆದಿದ್ದಾರೆ. ಅಂತೆಯೇ ಶಂತನುವಿನಿಂದ ಇಚ್ಛಾಮರಣದ ವರವನ್ನು ಪಡೆದ ಭೀಷ್ಮ ಯಾರೂ ಊಹಿಸದ ರೀತಿಯಲ್ಲಿ ಬಾಣದ ಮೊನೆಗಳಿಗೆ ಮೈಯೂರಿ ಮೈಯ ಇನ್ನೊಂದು ಸಾಧ್ಯತೆಯನ್ನು ತೋರಿಸಿದ. ಇದು ತನ್ನ ಮೈಯನ್ನು ತಾನೇ ಮೀರಿದಂತೆ ಶಿಲುಬೆಯಲ್ಲಿ ತೂಗಿದ ಏಸುವನ್ನು ನೆನಪಿಸುತ್ತದೆ’ ಎಂದು ತೋಳ್ಪಾಡಿಯವರು ಹೊಸ ಆಯಾಮವನ್ನು ನಮ್ಮ ಮುಂದಿಡುತ್ತಾರೆ. ಇತಿಹಾಸವು ಮರುಕಳಿಸುವುದು. ಅದಕ್ಕೇ ಅದನ್ನು ಇತಿಹಾಸ ಚಕ್ರವೆನ್ನುತ್ತೇವೆ. ಚಕ್ರಕ್ಕೆ ತನ್ನಲ್ಲೇ ತಾನು ಉರುಳುತ್ತಿರುವ, ತನ್ನಲ್ಲೇ ಮರುಕಳಿಸುತ್ತಿರುವ ಅನುಭವವಿದೆ ಎನ್ನುವ; ಪ್ರಕೃತಿಯ ಒಳದಾರಿಗಳೆಲ್ಲವೂ ಹೆದ್ದಾರಿಗಳೇ ಎನ್ನುವ; ಮಹಾಭಾರತವನ್ನು ಅರ್ಥ ಮಾಡಿಕೊಳ್ಳುವುದು, ಇದರ ಜೊತೆಗೆ ಸಾಗುವುದು ಸರಳ ಸುಖಕರವೇನಲ್ಲ ಎನ್ನುವ; ಕೊನೆಯದ್ದು ಮಾತಲ್ಲ ಮೌನವೇ ಎನ್ನುವಂತಹ ಸಾಲುಗಳು ಭಾರತದ ಅರ್ಥಸಾಧ್ಯತೆಯನ್ನು ಅಸೀಮವಾಗಿಸುವಲ್ಲಿ ಸಹಕರಿಸುತ್ತವೆ.ಮಹಾಭಾರತದ ನೆಪದಲ್ಲಿ ಅಡಿಗಡಿಗೆ ಜೀವನ ವಿಕಾಸವನ್ನು ಪೊರೆಯುತ್ತಾ, ನಮ್ಮಲ್ಲೊಂದು ತನ್ಮಯತೆಯನ್ನು, ವಿನಮ್ರತೆಯನ್ನು ತೋಳ್ಪಾಡಿಯವರ ಭಾರತ ಯಾತ್ರೆ ಮೂಡಿಸುತ್ತದೆ. ಚಳವಳಿಗಳನ್ನು ಮೀರುವ, ಜೀವನ ದರ್ಶನ ಮುಖ್ಯವಾಗುವ; ಸಮರ್ಪಣೆ-ವೈಚಾರಿಕತೆಗಳು ಹದವಾಗಿ ಸಂಯೋಜನೆಗೊಂಡ ಅಪರೂಪದ ಸಂದರ್ಭದಲ್ಲಿ ಇಂತಹ ವಿಶಿಷ್ಟ ಕೃತಿಗಳು ಸೃಷ್ಟಿಯಾಗುತ್ತವೆ. ಇದು ಯುಗದ ಕೃತಿ. ಜಗದ ಕೃತಿ. ನಮ್ಮ ಕಾಲದ ಅತ್ಯುತ್ತಮ ಇತಿಹಾಸ-ಕಥನ ಕ್ಷಣ. ಸಾಹಿತ್ಯ ಅಕ್ಯಾಡೆಮಿ ಈ ಕೃತಿಗೆ ಪ್ರಶಸ್ತಿ ನೀಡುವ ಮೂಲಕ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ ಎನ್ನುವ ಕ್ಲೀಷೆಯ ಸಾಲನ್ನು ಇನ್ನೊಮ್ಮೆ ಹೇಳಬಹುದಷ್ಟೇ.