ಸಾರಾಂಶ
ಸಿನಿವಾರ್ತೆ‘
ತಾಯಿ ವಿಶ್ವ ಸುಂದರಿ. ಆಕೆ ಹೋದಲೆಲ್ಲಾ ಆ ಹುಡುಗಿ ಬಾಲಂಗೋಚಿಯಂತೆ. ಮಕ್ಕಳನ್ನು ಹ್ಯಾಂಡ್ ಬ್ಯಾಗಿನಂತೆ ಬಳಸುವುದು ಎಂಥಾ ಸಂಸ್ಕೃತಿ’ ಎಂದು ಐಶ್ವರ್ಯಾ ರೈ ವಿರುದ್ಧ ನಟಿ ಮಾಳವಿಕಾ ಅವಿನಾಶ್ ಗುಡುಗಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮ್ಮ ಯಾವುದೋ ಇನ್‌ಸೆಕ್ಯುರಿಟಿಯ ಕಾರಣಕ್ಕೆ ನಾವು ಹೋದಲ್ಲೆಲ್ಲ ಹರೆಯದ ಹುಡುಗಿಯರನ್ನು ಕರೆದುಕೊಂಡು ಹೋಗುವುದು ಆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಮಕ್ಕಳ ಬಾಲ್ಯ, ಮುಗ್ಧತೆಯನ್ನು ಕಸಿಯುವ ಪ್ರಯತ್ನ ಇದಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
‘ವಿಶ್ವ ಸುಂದರಿ ಎಲ್ಲೇ ಹೊರಟರೂ ಆಕೆಯ ಒಂದು ಬದಿಯಲ್ಲಿ ಸ್ಟೈಲಿಸ್ಟ್, ಹೇರ್ ಡ್ರೆಸ್ಸರ್, ಮೇಕಪ್‌ನವರು, ಮತ್ತೊಂದು ಕಡೆ ಈ ಹುಡುಗಿ. ಇದೆಂತಹ ಅವಸ್ಥೆ. ಆ ಮಗುವಿಗೆ, ಶಾಲೆ, ಓದು ಏನೂ ಇರುವುದಿಲ್ಲವೆ? ಹೀಗೆ ತಾಯಿಯ ಜೊತೆ ಜಗತ್ತೆಲ್ಲ ತಿರುಗಾಡುತ್ತಾಳಲ್ಲಾ? ಸ್ಟೈಲಿಶ್ ಉಡುಗೆ ತೊಟ್ಟು ಪೋಸ್ ಕೊಡುವುದು ತಾಯಿಗಾದರೆ ವೃತ್ತಿ. ಆದರೆ ಈ ಮಗುವಿಗೆ ಅಲ್ಲೇನು ಕೆಲಸ? ಯಾಕೊ ಆ ದೃಶ್ಯವನ್ನು ನೋಡಿ ಬೇಜಾರಾಯಿತು. ನಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ನಾವೇ ಬಳಸಿಕೊಂಡು ಬಿಡುತ್ತೇವಾ’ ಎಂದು ಮಾಳವಿಕಾ ಬರೆದಿದ್ದಾರೆ.