ಸಾರಾಂಶ
ಯೋಗರಾಜ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರಕ್ಕೆ ಹಾಡಿದ ನಾ ಡ್ರೈವರಾ ಖ್ಯಾತಿಯ ಮಾಳು ನಿಪ್ನಾಳ್.
ಕನ್ನಡಪ್ರಭ ಸಿನಿವಾರ್ತೆ
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದ ‘ನಾ ಡ್ರೈವರಾ..’ ಹಾಡಿನ ಖ್ಯಾತಿಯ ಗಾಯಕ ಮಾಳು ನಿಪ್ನಾಳ್ ಅವರನ್ನು ಯೋಗರಾಜ ಭಟ್ಟರು ಹಿರಿತೆರೆಗೆ ಕರೆದುಕೊಂಡು ಬಂದಿದ್ದಾರೆ. ‘ಕರಟಕ ದಮನಕ’ ಸಿನಿಮಾದಲ್ಲಿನ ‘ಹಿತ್ತಲಕ ಕರಿಬ್ಯಾಡ ಮಾವ’ ಎಂಬ ಗೀತೆಯನ್ನು ಅವರಿಂದ ಹಾಡಿಸಿದ್ದು, ಆ ಹಾಡು ಈಗ ಟ್ರೆಂಡ್ ಆಗಿದೆ.ಇದು ಹಿನ್ನೆಲೆ ಗಾಯಕನಾಗಿ ಮಾಳು ಅವರ ಮೊದಲ ಸಿನಿಮಾ ಗೀತೆ. ‘ದೊಡ್ಡ ಪರದೆ ಸ್ಪೀಕರ್‌ಗೆ ಸ್ವಾಗತ’ ಎಂದು ಈ ಹಾಡಿಗೆ ಸಾಹಿತ್ಯ ಬರೆದಿರುವ ಚಿತ್ರದ ನಿರ್ದೇಶಕ ಯೋಗರಾಜ ಭಟ್, ಮಾಳು ಅವರನ್ನು ಸ್ಯಾಂಡಲ್‌ವುಡ್‌ಗೆ ಸ್ವಾಗತಿಸಿದ್ದಾರೆ. ಖ್ಯಾತ ಗಾಯಕಿ ಶ್ರುತಿ ಪ್ರಹ್ಲಾದ ಇವರಿಗೆ ಸಾಥ್ ನೀಡಿದ್ದಾರೆ. ಜಾನಪದ ಶೈಲಿಯ ಈ ಹಾಡಿಗೆ ಪ್ರಭುದೇವ ಹಾಗೂ ನಿಶ್ವಿಕಾ ನಾಯ್ಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನವಿದೆ.
ಮಾ.8ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಯೋಗರಾಜ್ ಭಟ್ಟರು ನಿರ್ದೇಶಿಸಿರುವ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿರುವ ಅದ್ದೂರಿ ಬಜೆಟ್‌ನ ಸಿನಿಮಾ ಇದಾಗಿದೆ. ಭಟ್ಟರು ಈ ಸಿನಿಮಾ ಕುರಿತು, ‘ಕರಟಕ ದಮನಕ ಎಂಬುದು ಎರಡು ಕುತಂತ್ರಿ ನರಿಗಳ ಹೆಸರು. ಅದೇ ಸ್ವಭಾವದ ಇಬ್ಬರ ಕತೆ. ಈ ಸಿನಿಮಾ ಪ್ರತಿಯೊಬ್ಬರಿಗೂ ಅವರ ಊರನ್ನು ನೆನಪಿಸುತ್ತದೆ’ ಎನ್ನುತ್ತಾರೆ.