ಸಾರಾಂಶ
ದಿಗಂತ್ ನಟನೆಯ ಮಾರಿಗೋಲ್ಡ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
ಕನ್ನಡಪ್ರಭ ಸಿನಿವಾರ್ತೆ
‘ಮಾರಿಗೋಲ್ಡ್ ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇನೆ. ಹೊಗೆ, ಧೂಳಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಮ್ಮೊಮ್ಮೆ ಏಳೆಂಟು ಟೇಕ್ ಆಗುತ್ತಿತ್ತು. ಚಿತ್ರ ನೋಡಿದಾಗ ಯಾಕೆ ಅಷ್ಟೊಂದು ಟೇಕ್ ತೆಗೆದುಕೊಂಡರು ಎಂಬುದು ಅರ್ಥವಾಯಿತು. ನನ್ನ ಬೆನ್ನು ಬೆನ್ನು ತಟ್ಟಿಕೊಳ್ಳುವಂತೆ ಈ ಚಿತ್ರದಲ್ಲಿ ನಟಿಸಿದ್ದೇನೆ’.- ‘ಮಾರಿಗೋಲ್ಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ದಿಗಂತ್ ಹೀಗೆ ಹೇಳಿದರು. ದಿಗಂತ್ ನಾಯಕನಾಗಿ, ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿರುವ ಈ ಚಿತ್ರ ಏ.5ರಂದು ಬಿಡುಗಡೆ ಆಗಲಿದೆ. ಚಿನ್ನದ ಬಿಸ್ಕತ್ ಮಾರಲು ಹೊರಟ ನಾಲ್ಕು ಮಂದಿಯ ಕತೆ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ ನಾಯ್ಕ್ ನಿರ್ದೇಶಿಸಿದ್ದು, ರಘುವರ್ಧನ್ ನಿರ್ಮಿಸಿದ್ದಾರೆ.
ಈ ಸಂದರ್ಭದಲ್ಲಿ ರಾಘವೇಂದ್ರ ಎಂ ನಾಯ್ಕ್, ‘ಗೋಲ್ಡು, ಹಣ, ಆಸೆ, ಪೊಲೀಸು, ಕ್ರೈಮು ಇತ್ಯಾದಿಗಳ ಸುತ್ತಾ ಸಾಗುವ ಸಿನಿಮಾ ಇದು. ಈ ಚಿತ್ರ ಆಗುವುದಕ್ಕೆ ಮುಖ್ಯ ಕಾರಣ ನಿರ್ಮಾಪಕ ರಘುವರ್ಧನ್ ಹಾಗೂ ಸಿನಿಮಾ ಪತ್ರಕರ್ತ ವಿಜಯ್ ಭರಮಸಾಗರ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ’ ಎಂದರು. ಸಂಗೀತಾ ಶೃಂಗೇರಿ, ‘ಶಾಲಾ ದಿನಗಳಲ್ಲೇ ನನಗೆ ದಿಗಂತ್ ಮೇಲೆ ಕ್ರಷ್ ಆಗಿತ್ತು. ಈಗ ಅವರ ಜತೆ ನಟಿಸಿದ್ದೇನೆ ಎನ್ನುವುದು ಖುಷಿ’ ಎಂದರು. ನಿರ್ಮಾಪಕ ರಘುವರ್ಧನ್, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಗಣೇಶ್‌ರಾವ್ ಕೇಸರ್‌ಕರ್, ಮಹಂತೇಶ್ ಹಿರೇಮಠ್, ಸಂಗೀತ ನಿರ್ದೇಶಕ ವೀರ್ ಸಮರ್ಥ್, ಸಂಭಾಷಣೆಕಾರ ರಘು ನಿಡುವಳ್ಳಿ, ಸಾಹಿತಿ ಕವಿರಾಜ್ , ಛಾಯಾಗ್ರಾಹಕ ಕೆ ಎಸ್ ಚಂದ್ರಶೇಖರ್ ಇದ್ದರು.