ಸಾರಾಂಶ
ಸಿನಿವಾರ್ತೆ
ಕಿಚ್ಚ ಸುದೀಪ್ ವಿಶೇಷವಾದ ಪಾತ್ರದಲ್ಲಿ ನಟಿಸಿರುವ ‘ಉಸಿರೇ ಉಸಿರೇ’ ಸಿನಿಮಾ ಮೇ 3ಕ್ಕೆ ತೆರೆಗೆ ಬರುತ್ತಿದೆ. ಪ್ರದೀಪ್ ಯಾದವ್ ನಿರ್ಮಾಣದ, ಸಿ ಎಂ ವಿಜಯ್ ನಿರ್ದೇಶನದ, ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ ಚಿತ್ರವಿದು.
ಸುದ್ದಿಗೋಷ್ಠಿಯಲ್ಲಿ ರಾಜೀವ್ ಹನು ಮಾತನಾಡಿ, ‘ನಾನು ಈ ಚಿತ್ರಕ್ಕಾಗಿ ಐದು ವರ್ಷಗಳ ಕಾಲ ಶ್ರಮಪಟ್ಟಿದ್ದೇನೆ. ಈ ಸಮಯದಲ್ಲಿ ಬೇರೆ ಯಾವ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಕೊನೆಗೂ ಸಿನಿಮಾ ತೆರೆಗೆ ಬರುತ್ತಿದೆ’ ಎಂದರು.
ನಿರ್ಮಾಪಕ ಪ್ರದೀಪ್ ಯಾದವ್, ‘ನನಗೆ ಚಿತ್ರರಂಗ ಹೊಸತು. ನಿರ್ದೇಶಕ ವಿಜಯ್ ಈ ಚಿತ್ರದ ಕಥೆ ಹೇಳಿ ನಿರ್ಮಾಣಕ್ಕೆ ಕರೆತಂದರು. ಕೊನೆಗೆ ನಡು ನೀರಲ್ಲಿ ಕೈಬಿಟ್ಟು ಹೋದರು. ಅವರಿಂದ ನಾನು ಈ ಚಿತ್ರಕ್ಕಾಗಿ ಮನೆ ಮಾರಿಕೊಂಡಿದ್ದೇನೆ. ಅವರು ನಮ್ಮ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಅವರಿಂದ ನನಗೆ ನಷ್ಟವಾಗಿದೆ. ಹೇಳಿದ ದುಡ್ಡಿಗಿಂತ ಹೆಚ್ಚು ಖರ್ಚು ಮಾಡಿಸಿದ್ದಾರೆ. ತುಂಬಾ ಅನನುಕೂಲವಾಗಿದೆ’ ಎಂದು ಆರೋಪಿಸಿದರು.
ಚಿತ್ರದ ನಾಯಕಿ ಶ್ರೀಜಿತ ಘೋಶ್, ಪ್ರೀತಿ ಗೌಡ, ಸಹ ನಿರ್ಮಾಪಕರಾದ ಮಂಜುನಾಥ್ ಕಪೂರ್, ಚಂದ್ರಶೇಖರ್ ರೆಡ್ಡಿ ಇದ್ದರು. ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಬ್ರಹ್ಮಾನಂದಂ, ಅಲಿ, ಸಾಧುಕೋಕಿಲ, ಮಂಜು ಪಾವಗಡ, ಶೈನಿಂಗ್ ಸೀತರಾಮ್ ತಾರಾಬಳಗದಲ್ಲಿದ್ದಾರೆ.