ಪ್ರೀತಿಯ ಹಿಂದೆ ಸಾವುಂಟು‍!

| Published : Mar 16 2024, 01:51 AM IST / Updated: Mar 16 2024, 02:09 PM IST

ಸಾರಾಂಶ

ಬಿಗ್ ಬಾಸ್ ವಿನ್ನರ್ ಶಶಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಮೆಹಬೂಬಾ ಸಿನಿಮಾ, ಧರ್ಮ ಮೀರಿದ ಪ್ರೇಮ ಕತೆಯನ್ನು ಹೇಳುತ್ತದೆ.

ಚಿತ್ರ: ಮೆಹಬೂಬಾ
ತಾರಾಗಣ: ಶಶಿ, ಪಾವನಾ, ಜೈ ಜಗದೀಶ್‌, ವಿಜಯಲಕ್ಷ್ಮೀ ಸಿಂಗ್‌, ಸಂದೀಪ್‌, ಬುಲೆಟ್‌ ಪ್ರಕಾಶ್‌, ಕಬೀರ್‌ ದುಹಾನ್‌ ಸಿಂಗ್‌
ನಿರ್ದೇಶನ: ಅನೂಪ್‌ ಆಂಟೋನಿ
ರೇಟಿಂಗ್‌: 3

ಜಾತಿ, ಧರ್ಮಗಳ ಬೇಲಿ ಮೀರಿದ ಪ್ರೇಮ ಕತೆಗಳನ್ನು ಆಗಾಗ ಬೆಳ್ಳಿತೆರೆಯನ್ನು ಬೆಳಗುತ್ತಲೇ ಬಂದಿವೆ. ಅದೇ ಸಾಲಿಗೆ ಸೇರುವ ಸಿನಿಮಾ ‘ಮೆಹಬೂಬಾ’. ಬಿಗ್‌ಬಾಸ್‌ ವಿಜೇತ ಶಶಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಸಿನಿಮಾ ಇದು.

ರಾಜಕೀಯ ಕುಟುಂಬದ ಕಾರ್ತಿಕ್, ಸಾಮಾನ್ಯ ಮುಸ್ಲಿಂ ಕುಟುಂಬದ ಹುಡುಗಿ ನಜ್ರಿಯಾ ಭಾನು. ಈ ಇಬ್ಬರ ಆಕಸ್ಮಿಕ ಭೇಟಿ, ಪರಿಚಯ, ಸ್ನೇಹ, ಮುಂದೆ ಪ್ರೀತಿ. 

ಕೊನೆಗೂ ಇಬ್ಬರು ಮದುವೆ ಆಗುವ ನಿರ್ಧಾರಕ್ಕೆ ಬರುತ್ತಾರೆ. ಆದರೆ, ಇವರ ಮದುವೆ ಆಗುತ್ತದೆಯೇ, ಪ್ರೀತಿ ಗೆಲ್ಲುತ್ತದೆಯೇ ಎಂಬುದು ಚಿತ್ರದ ಕತೆ.

ಸಾವಯವ ಕೃಷಿಯ ಕುರಿತು ಪ್ರಾಜೆಕ್ಟ್‌ ಮಾಡುತ್ತಿರುವ ನಾಯಕಿ, ಜವಾಬ್ದಾರಿ ಇಲ್ಲದೆ ಓಡಿಡಾಡಿಕೊಂಡಿರುವ ಹುಡುಗ. ಈ ಎರಡೂ ಪಾತ್ರಗಳ ಮೂಲಕ ನಿರ್ದೇಶಕ ಅನೂಪ್‌ ಆಂಟೋನಿ ಅವರು ಒಂದು ಸೌಹಾರ್ದ ಸಂಬಂಧವನ್ನು ಬೆಸೆಯುವ ಪ್ರೇಮ ಕತೆಯನ್ನು ಹೇಳಿದ್ದಾರೆ. 

ಆದರೆ, ಇದರ ಅಂತ್ಯ ಏನು ಎಂಬುದೇ ಚಿತ್ರದ ಕುತೂಹಲ ಮತ್ತು ತಿರುವು. ಹೀಗಾಗಿ ಒಮ್ಮೆ ನೋಡುವ ಸಿನಿಮಾ ಇದು. ನಿಧಾನವಾಗಿಯಾದರೂ ಕತೆಯ ಪ್ರತಿಯೊಂದನ್ನು ಹೇಳಬೇಕು ಎನ್ನುವ ನಿರ್ದೇಶಕರ ತುಡಿತ ಕೊನೆತನಕ ಸಾಗುತ್ತದೆ.

ಮೊದಲ ಚಿತ್ರದಲ್ಲಿ ಶಶಿ ನಟನೆ ಹಾಗೂ ಆ್ಯಕ್ಷನ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಮುಸ್ಲಿಂ ಹುಡುಗಿ ಪಾತ್ರದಲ್ಲಿ ಪಾವನಾ ಗೌಡ ಮುದ್ದಾಗಿ ಕಾಣುತ್ತಾರೆ. ಜೈ ಜಗದೀಶ್‌, ವಿಜಯಲಕ್ಷ್ಮೀ ಸಿಂಗ್‌, ಶಿವರಾಮಣ್ಣ, ಬುಲೆಟ್‌ ಪ್ರಕಾಶ್‌ ಅವರ ಪಾತ್ರಗಳು ಕತೆಗೆ ಪೂರಕವಾಗಿವೆ.