ಸಾರಾಂಶ
ಫೆ.7ಕ್ಕೆ ಬಿಡುಗಡೆಯಾಗುವ ಮಿಸ್ಟರ್ ರಾಣಿ ಚಲನಚಿತ್ರವನ್ನು ವಾಸ್ಕೋಡಿಗಾಮ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರ ನಿರ್ದೇಶಕರಾದ ಮಧುಚಂದ್ರ ಅವರು ನಿರ್ದೇಶಿಸಿದ್ದು, ರಾಜ್ಯದಲ್ಲೇ ಚಿತ್ರೀಕರಣ ಮಾಡಲಾಗಿದೆ.
ಮಂಡ್ಯ : ವಿಭಿನ್ನ ಕಥಾಪಾತ್ರಾಧಾರಿತ ಮಿಸ್ಟರ್ ರಾಣಿ ಚಲನಚಿತ್ರವು ಫೆ.೭ರಂದು ರಾಜ್ಯಾದ್ಯಂತ ಕೆಆಜಿರ್ ಫಿಲಂಸ್ ಅವರಿಂದ ಬಿಡುಗಡೆಯಾಗಲಿದೆ. ಚಿತ್ರ ರಸಿಕರು ಚಿತ್ರ ಮಂದಿರದಲ್ಲೇ ಚಲನಚಿತ್ರ ವೀಕ್ಷಿಸುವಂತೆ ನಾಯಕ ನಟ ದೀಪಕ್ ಸುಬ್ರಮಣ್ಯ ಮನವಿ ಮಾಡಿದರು.
ನಾಯಕ ನಟನಾಗಿ ಸುಮಾರು 11 ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ಪ್ರಸ್ತುತ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಹಾಗೂ ಮಿಸ್ಟರ್ ರಾಣಿ ಚಲನಚಿತ್ರದಲ್ಲಿ 40 ಮಹಿಳಾ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.7ಕ್ಕೆ ಬಿಡುಗಡೆಯಾಗುವ ಮಿಸ್ಟರ್ ರಾಣಿ ಚಲನಚಿತ್ರವನ್ನು ವಾಸ್ಕೋಡಿಗಾಮ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರ ನಿರ್ದೇಶಕರಾದ ಮಧುಚಂದ್ರ ಅವರು ನಿರ್ದೇಶಿಸಿದ್ದು, ರಾಜ್ಯದಲ್ಲೇ ಚಿತ್ರೀಕರಣ ಮಾಡಲಾಗಿದೆ. ಎಕ್ಸೆಲ್ ಆರ್ಬಿಟ್ ಕ್ರಿಯೇಶನ್ಸ್ ನಿರ್ಮಾಣದ ಚಲನಚಿತ್ರಕ್ಕೆ 180 ಮಂದಿ ಜನಸಾಮಾನ್ಯರೇ ನಿರ್ಮಾಪಕರಾಗಿ 4.5 ಕೋಟಿ ರು. ಹೂಡಿದ್ದಾರೆ ಎಂದರು.
ನಾಯಕಿಯಾಗಿ ಪಾರ್ವತಿ ನಾಯರ್ ಅಭಿನಯಿಸಿದ್ದು, ಲಕ್ಷ್ಮೀಕಾರಂತ್, ಶ್ರೀವತ್ಸ, ಮಧುಚಂದ್ರ, ಆನಂದ್ ನಿನಾಸಂ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿ ರವೀಂದ್ರನಾಥ್ ಹಾಗೂ ವಿಶ್ವಾಸ್ ಕೆಲಸ ಮಾಡಿದ್ದಾರೆ ಎಂದರು.
ಚಲನಚಿತ್ರ ಪ್ರದರ್ಶನಕ್ಕೆ ಇತರೆ ರಾಜ್ಯಗಳಲ್ಲಿ ಕಡಿಮೆ ಬೆಲೆಯಿದ್ದು, ಕರ್ನಾಟಕದಲ್ಲಿ ಪ್ರದರ್ಶನ ಬೆಲೆ ಹೆಚ್ಚಿದೆ ಎಂದು ದೂರುಗಳಿರುವುದರಿಂದ ಬಿಡುಗಡೆಯ ಮೊದಲ ದಿನ ಪ್ರದರ್ಶನದ ಟಿಕೆಟ್ ಬೆಲೆಯನ್ನು 99 ರು. ಗಳಿಗೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೋಷ್ಠಿಯಲ್ಲಿ ಚಿತ್ರದ ಸಹವರ್ತಿಯಾಗಿ ಕಾರ್ಯನಿರ್ವಹಿಸಿದ ಸಿದ್ದು, ಸಹ ನಿರ್ದೇಶಕ ತಂಡದ ಚಂದ್ರಕಾಂತ್, ವಿನೋದ್ ಇದ್ದರು.