ಸಾರಾಂಶ
ಮಿ. ನಟ್ವರ್ ಲಾಲ್
ತಾರಾಗಣ: ತನುಷ್ ಶಿವಣ್ಣ, ರಾಜೇಶ್ ನಟರಂಗ, ಸೋನಾಲ್ ಮೊಂತೆರೋ, ನಾಗಭೂಷಣ್ನಿರ್ದೇಶನ: ಲವ ಕಗ್ಗೆರೆ
ರೇಟಿಂಗ್: 3- ಪ್ರಿಯಾ ಕೆರ್ವಾಶೆದಶಕಗಳ ಕೆಳಗೆ ನಮ್ಮ ಪಾರ್ಲಿಮೆಂಟ್, ತಾಜ್‌ಮಹಲ್‌ಗಳನ್ನೇ ಮಾರಲು ಹೊರಟಿದ್ದ ಕ್ರಿಮಿನಲ್ ಮಿಥಿಲೇಶ್ ಕುಮಾರ್ ಶ್ರೀವಾಸ್ತವ್ ನೆನಪು ಮಾಸುತ್ತಿರುವಾಗಲೇ ಆತನನ್ನು ಮತ್ತೊಮ್ಮೆ ನೆನಪಿಸಿದ ಸಿನಿಮಾ ‘ಮಿ. ನಟ್ವರ್‌ಲಾಲ್’. ಯಾವುದೋ ಘಟನೆ, ಮತ್ಯಾವುದೋ ಹುನ್ನಾರ ನಮ್ಮ ನಿಮ್ಮ ನಡುವೆ ಇರುವ ಸಾದಾ ಸೀದಾ ಹುಡುಗನನ್ನು ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಹೇಗೆ ಕ್ರಿಮಿನಲ್ ಮಾಡಬಹುದು ಅನ್ನೋದನ್ನು ಈ ಸಿನಿಮಾ ಹೇಳುತ್ತೆ.
ತನ್ನ ಊರು, ಕೃಷಿ, ಜಿಮ್ ಅಂತ ತನ್ನ ಪಾಡಿಗೆ ತಾನಿದ್ದ ಯುವಕ ಜಿಮ್ ರಂಗ. ಕೌಟುಂಬಿಕ ದ್ವೇಷದ ಹಿನ್ನೆಲೆ ಈತನನ್ನು ಊರೇ ಬಿಟ್ಟು ಹೋಗುವ ಹಾಗೆ ಮಾಡುತ್ತದೆ. ಹೋಗಿ ಸೇರುವ ಇನ್ನೊಂದು ಊರು ಮತ್ತೊಂದು ದುರಂತಕ್ಕೆ ಕಾರಣವಾಗುತ್ತದೆ. ಆ ದುರಂತ ಯಾವುದು, ಮುಂದೆ ನಡೆಯುವ ಕದನ ಕುತೂಹಲವೇನು ಎಂಬುದು ಇಂಟರೆಸ್ಟಿಂಗ್. ನಡುವೆ ಲೆಕ್ಕ ಭರ್ತಿಗೆ ಪ್ರೇಮಕಥೆ, ಅನಾವಶ್ಯಕ ಸನ್ನಿವೇಶಗಳು ಕಥೆಯಿಂದ ಆಚೆ ನಿಲ್ಲುತ್ತವೆ.ಇಂಟರ್‌ವಲ್ ನಂತರದ ಭಾಗ ವೇಗ ಪಡೆದುಕೊಳ್ಳುತ್ತದೆ. ದಶಕಗಳ ಹಿಂದಿನ ಕ್ರಿಮಿನಲ್ ‘ನಟ್ವರ್ ಲಾಲ್’ ತಂತ್ರಗಳನ್ನೇ ಅನುಸರಿಸುವ ಕ್ರಿಮಿನಲ್‌ನ ತೀಕ್ಷ್ಣ ಬುದ್ಧಿಮತ್ತೆ, ಕಾರ್ಯತಂತ್ರ ಕುರ್ಚಿ ತುದಿಯಲ್ಲಿ ಕೂರಿಸುತ್ತದೆ. ಗೇಮ್‌ನ ಹಿಂದೆ ಬೀಳುವ ಇನ್‌ವೆಸ್ಟಿಗೇಟಿವ್ ಆಫೀಸರ್ ಅಲೋಕ್ ಮೂಲಕ ಕಥೆಯ ಮತ್ತೊಂದು ಆಯಾಮ ತೆರೆದುಕೊಳ್ಳುತ್ತದೆ.
ಕೆಲವೊಂದು ಕಡೆ ಹಿಂದಿಯ ಧೂಮ್ ಚಿತ್ರದ ಸೀನ್ ಅನ್ನು ನೆನಪಿಸುವ ದೃಶ್ಯಗಳಿವೆ. ರೋಚಕತೆ, ಅನೂಹ್ಯ ತಿರುವುಗಳು, ಸೈಬರ್ ಕ್ರೈಮ್‌ನ ಸೂಕ್ಷ್ಮ ಜಾಲಗಳು ಈ ಥ್ರಿಲ್ಲರ್‌ನ ಜೀವಾಳ.ಎಸಿಪಿ ಅಲೋಕ್ ಪಾತ್ರದಲ್ಲಿ ರಾಜೇಶ್ ನಟರಂಗ ಅವರದು ಪಳಗಿದ ಅಭಿನಯ. ನಾಯಕ ತನುಷ್ ಶಿವಣ್ಣ, ನಟ ನಾಗಭೂಷಣ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಹೊಸತನದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೇ ಹೋದರೆ ಕೊಟ್ಟ ಕಾಸಿಗೆ ಮೋಸ ಮಾಡದೇ ಮನರಂಜನೆ ನೀಡುವ ಚಿತ್ರ.