ಹಾರರ್ ಹಿನ್ನೆಲೆಯಲ್ಲಿ ಥ್ರಿಲ್ಲರ್‌ ಕಥನ

| Published : Apr 20 2024, 01:05 AM IST / Updated: Apr 20 2024, 10:07 AM IST

ಸಾರಾಂಶ

ನಾಲ್ಕನೇ ಆಯಾಮ ಚಿತ್ರ ಹೇಗಿದೆ ಎನ್ನುವುದರ ವಿಮರ್ಶೆ ಇಲ್ಲಿದೆ.

ಚಿತ್ರ: ನಾಲ್ಕನೇ ಆಯಾಮ

ತಾರಾಗಣ: ಗೌತಮ್, ರಚನಾ ಇಂದರ್, ಅಮಿತ್ ಗೌಡ, ಯಶಸ್ವಿನಿ ಎಂ , ಬಲ ರಾಜ್‌ವಾಡಿ, ವಿನ್ಸೆಂಟ್, ಮಂಜು ಸ್ವಾಮಿ

ನಿರ್ದೇಶನ: ಗೌತಮ್‌ ಆರ್‌

ರೇಟಿಂಗ್: 3ಆರ್‌.ಕೆ

ಸಿನಿಮಾದಲ್ಲೊಂದು ಸಿನಿಮಾ ಕತೆಯಂತೆ ಸಾಗಿ, ನಿಗೂಢವಾದ ದೊಡ್ಡ ಬಂಗಲೆ, ಕುತೂಹಲಕರ ಸಸ್ಪೆನ್ಸ್‌, ಚೂರು ಇತಿಹಾಸದ ಪುಟಗಳಲ್ಲಿ ನಡೆದಾಡಿ ಮತ್ತೆ ಅದೇ ನಿಗೂಢ ಬಂಗಲೆಯಲ್ಲಿ ಮುಕ್ತಾಯವಾಗುವ ಸಿನಿಮಾ ‘ನಾಲ್ಕನೇ ಆಯಾಮ’.

ಸಿನಿಮಾ ನಿರ್ದೇಶಿಸುವ ಕನಸು ಕಾಣುತ್ತಿರುವ ಯುವಕ ಮತ್ತು ಆತನ ಸ್ನೇಹಿತ, ಜೊತೆಗೆ ಇಬ್ಬರು ಗೆಳತಿಯರು ಒಳಗೊಂಡು ಒಟ್ಟು ನಾಲ್ಕು ಮಂದಿ ಸೇರಿ ಮಡಿಕೇರಿಯ ದೊಡ್ಡ ಮನೆಯೊಂದಕ್ಕೆ ಹೋಗುತ್ತಾರೆ. ಅಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಯುವ ನಿರ್ದೇಶಕ ಬರೆದಿಟ್ಟಿರುವಂತೆಯೇ ಅಲ್ಲಿ ನಡೆಯುತ್ತಿರುವ ಅಚ್ಚರಿ ಎದುರಾಗುತ್ತದೆ. ಮುಂದೇನು ಎನ್ನುವುದೇ ಚಿತ್ರದ ಕುತೂಹಲ.

ಈ ದೊಡ್ಡ ಮನೆಯಲ್ಲಿ ಹಾರರ್ ನೆರಳಲ್ಲಿ ಕತೆ ಮುಂದೆ ಸಾಗುತ್ತದೆ. ನಾಲ್ಕೈದು ಮಂದಿ ಒಂದು ಮನೆಗೆ ಹೋಗುವುದು, ಅಲ್ಲಿ ನಿಗೂಢ ಕತೆ ತೆರೆದುಕೊಳ್ಳುವುದು, ಹಾಗಾದರೆ ಮುಂದೇನು ಎನ್ನುವ ಯಕ್ಷ ಪ್ರಶ್ನೆಗಳು ಎದುರಾಗುವುದು ಇತ್ಯಾದಿ ಅಂಶಗಳು ಸಿನಿಮಾದಲ್ಲಿ ಸಾಮಾನ್ಯ. ಆದರೆ ಅದಕ್ಕೆ ಮಿಗಿಲಾದ ತಿರುವು ಈ ಸಿನಿಮಾದ ವಿಶೇಷತೆ. ಹಾರರ್‌ ನೆರಳಲ್ಲಿ ಥ್ರಿಲ್ಲರ್‌ ಗುಣ ಈ ಚಿತ್ರದ ಚಿತ್ರಕತೆಯ ಶಕ್ತಿ. ಅದರಿಂದಲೇ ಈ ಚಿತ್ರಕ್ಕೆ ಬಲ ದಕ್ಕಿದೆ.

ಹಾರರ್‌ ಚಿತ್ರಗಳಿಗೆ ಕತೆಯಷ್ಟೇ ತಾಂತ್ರಿಕತೆಯೂ ಪ್ರಮುಖ. ತಾಂತ್ರಿಕ ಪ್ರಯತ್ನ ಇಲ್ಲಿ ಗಮನಾರ್ಹ. ರಚನಾ ಇಂದರ್‌ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಗೌತಮ್ ಮತ್ತು ಇತರ ನಟ, ನಟಿಯರ ಪಾತ್ರ ಪೋಷಣೆ, ನಿರ್ದೇಶನ, ಛಾಯಾಗ್ರಾಹಣ ಚಿತ್ರಕ್ಕೆ ನ್ಯಾಯಯುತ ಕೊಡುಗೆ ನೀಡಿವೆ.