ಸಾರಾಂಶ
ಸ್ಮಾರ್ಟ್‌ಫೋನ್ ಜಗತ್ತಿಗೆ ಕಾಲಿಟ್ಟಿರುವ ಇಂಡಸ್ ಆ್ಯಪ್‌ಸ್ಟೋರ್‌ನಲ್ಲಿ ಸದ್ಯ 45 ವಿಭಾಗಗಳಲ್ಲಿ, 2 ಲಕ್ಷಕ್ಕೂ ಹೆಚ್ಚು ಆ್ಯಪ್‌ಗಳಿವೆ. ಯಾವುದೇ ಪ್ರೀಮಿಯಂ ಆ್ಯಪ್‌ಗೂ ಶುಲ್ಕ ವಿಧಿಸದೇ ಇರುವುದು ಇಂಡನ್‌ನ ಮತ್ತೊಂದು ವಿಶೇಷತೆ. ಆ್ಯಪಲ್ ಮತ್ತು ಗೂಗಲ್‌ನ ಆ್ಯಪ್ ಸ್ಟೋರ್‌ಗಳು ಖರೀದಿಗಳಿಗೆ ಶುಲ್ಕ ವಿಧಿಸುತ್ತವೆ.
ನಾಸಿರ್ ಸಜಿಪಕನ್ನಡಪ್ರಭ ವಾರ್ತೆ ನವದೆಹಲಿ
ದಶಕಗಳಿಂದಲೂ ಅಂಡ್ರಾಯ್ಡ್ ಜಗತ್ತಿನಲ್ಲಿ ಏಕಸ್ವಾಮ್ಯತೆ ಹೊಂದಿದ್ದ ಗೂಗಲ್ ಪ್ಲೇ ಸ್ಟೋರ್‌ಗೆ ಪ್ರತಿಸ್ಪರ್ಧಿಯಾಗಿ ‘ಇಂಡಸ್ ಆ್ಯಪ್‌ಸ್ಟೋರ್’ ಸ್ಮಾರ್ಟ್‌ಫೋನ್ ಜಗತ್ತಿಗೆ ಕಾಲಿಟ್ಟಿದೆ. ವಾಲ್‌ಮಾರ್ಟ್ ಮಾಲೀಕತ್ವದ, ಜನಪ್ರಿಯ ಡಿಜಿಟಲ್ ಪೇಮೆಂಟ್ ಆ್ಯಪ್ ಫೋನ್‌ಪೇ ಸಂಸ್ಥೆ ಅಭಿವೃದ್ಧಿಪಡಿಸಿದ ಹೊಸ ಸ್ವದೇಶಿ ಆ್ಯಪ್‌ಸ್ಟೋರ್ ಸದ್ಯ ಕೋಟ್ಯಂತರ ಭಾರತೀಯರ ಬಳಕೆಗೆ ಮುಕ್ತವಾಗಿದೆ.‘ಇಂಡಿಯಾ ಕಾ ಆ್ಯಪ್‌ಸ್ಟೋರ್’ ಘೋಷ ವಾಕ್ಯದೊಂದಿಗೆ ಆ್ಯಪ್‌ಸ್ಟೋರ್‌ಗೆ ದೇಸಿ ಸ್ಪರ್ಶ ನೀಡಿರುವ ಇಂಡಸ್, ಪ್ರಾದೇಶಿಕ ಭಾಷೆಗಳ ಆಯ್ಕೆ ನೀಡುವುದರೊಂದಿಗೆ ಪ್ರತಿ ಹಳ್ಳಿ, ಗ್ರಾಮೀಣ ಭಾಗದ ಜನರನ್ನೂ ತಲುಪುವ ಗುರಿ ಇಟ್ಟುಕೊಂಡಿದೆ. ಗೂಗಲ್, ಆ್ಯಪಲ್ ಸಂಸ್ಥೆಗಳಿಗೆ ಪ್ರಬಲ ಪೈಪೋಟಿ ನೀಡುವ ಗುರಿ ಇಟ್ಟುಕೊಂಡಿರುವ ಆ್ಯಪ್‌ಸ್ಟೋರ್‌ಗೆ ಬುಧವಾರ ನವದೆಹಲಿಯಯಲ್ಲಿ ಚಾಲನೆ ನೀಡಲಾಯಿತು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಪ್ರಮುಖ ಟೆಕ್ ಉದ್ಯಮಿಗಳು ಆ್ಯಪ್‌ಸ್ಟೋರ್ ಲೋಕಾರ್ಪಣೆಗೆ ಸಾಕ್ಷಿಯಾದರು.12 ಭಾಷೆಗಳಲ್ಲಿ ಲಭ್ಯ: ಇಂಡಸ್ ಆ್ಯಪ್‌ಸ್ಟೋರ್‌ನ ವಿಶೇಷತೆ ಏನೆಂದರೆ ಆ್ಯಪ್‌ನಲ್ಲಿ ಕನ್ನಡ ಸೇರಿದಂತೆ ಒಟ್ಟು 12 ಭಾಷೆಗಳಲ್ಲಿ ನಿಮಗೆ ಆ್ಯಪ್‌ಗಳನ್ನು ಸರ್ಚ್ ಮಾಡಬಹುದು. ಪ್ರತಿ ಆ್ಯಪ್‌ಗಳ ಮಾಹಿತಿಯನ್ನೂ ನಿಮ್ಮ ಆಯ್ಕೆಯ ಭಾಷೆಯಲ್ಲಿ ತಿಳಿದುಕೊಳ್ಳಬಹುದು. ‘ಇಂಗ್ಲಿಷ್ ಸೇರಿದಂತೆ 12 ಭಾಷೆಗಳಲ್ಲಿ ನಿಮಗೆ ಆ್ಯಪ್‌ಸ್ಟೋರ್ ಬಳಸಬಹುದು. ಇದರಿಂದ ಶೇ.95ರಷ್ಟು ಭಾರತೀಯರ ಬೇಡಿಕೆಯನ್ನು ಈಡೇರಿಸುತ್ತಿದ್ದೇವೆ’ ಎನ್ನುತ್ತಾರೆ ಫೋನ್‌ಪೇ ಸಿಇಒ ಮತ್ತು ಸಂಸ್ಥಾಪಕ ಸಮೀರ್ ನಿಗಮ್.ಸದ್ಯ ಇಂಡಸ್ ಆ್ಯಪ್‌ಸ್ಟೋರ್‌ನಲ್ಲಿ 45 ವಿಭಾಗಗಳಲ್ಲಿ, 2 ಲಕ್ಷಕ್ಕೂ ಹೆಚ್ಚು ಆ್ಯಪ್‌ಗಳಿವೆ. ಯಾವುದೇ ಪ್ರೀಮಿಯಂ ಆ್ಯಪ್‌ಗೂ ಶುಲ್ಕ ವಿಧಿಸದೇ ಇರುವುದು ಇಂಡನ್‌ನ ಮತ್ತೊಂದು ವಿಶೇಷತೆ. ಆ್ಯಪಲ್ ಮತ್ತು ಗೂಗಲ್‌ನ ಆ್ಯಪ್ ಸ್ಟೋರ್‌ಗಳು ಖರೀದಿಗಳಿಗೆ 30% ವರೆಗೆ ಶುಲ್ಕ ವಿಧಿಸುತ್ತವೆ.ಇನ್ನು, ಇಂಡಸ್‌ನಲ್ಲಿ ಶಾರ್ಟ್ ವಿಡಿಯೋಗಳ ಮೂಲಕವೂ ಆ್ಯಪ್‌ಗಳ ಹುಡಾಕಾಟಕ್ಕೆ ಅವಕಾಶವಿದೆ. ಇಂಡಸ್‌ನಲ್ಲಿ ಡೆವಲಪರ್‌ಗಳಿಗೆ ಸಂಬಂಧಿಸಿದಂತೆಯೂ ಹಲವು ಪ್ರಯೋಜನಗಳಿವೆ. ಮೊದಲ ವರ್ಷಕ್ಕೆ ತಮ್ಮ ಆ್ಯಪ್‌ಗಳನ್ನು ಸ್ಟೋರ್‌ನಲ್ಲಿ ಒದಗಿಸಲು ತಯಾರಕರಿಗೆ ಯಾವುದೇ ಶುಲ್ಕ ಇಲ್ಲ. ಆ ಬಳಿಕವೂ ಡೆವಲಪರ್‌ಗಳಿಂದ ಕನಿಷ್ಠ ಶುಲ್ಕವನ್ನು ಮಾತ್ರ ಪಡೆಯುವುದಾಗಿ ಸಮೀರ್ ತಿಳಿಸಿದ್ದಾರೆ.‘ಮೊಬೈಲ್ ಆ್ಯಪ್ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಇಂಡಸ್ ಆ್ಯಪ್‌ಸ್ಟೋರ್ ನೀಡಲಿದೆ. ಇದನ್ನು ಪ್ರತಿಯೊಬ್ಬರ ಭಾರತೀಯನೂ ತನ್ನದೇ ಆ್ಯಪ್‌ಸ್ಟೋರ್ ಅಂತ ಭಾವಿಸಬಹುದು’ ಎಂದು ಸಮೀರ್ ಸಮಾರಂಭದಲ್ಲಿ ಹೇಳಿದರು.ಆ್ಯಪ್‌ಸ್ಟೋರ್ ಬಳಕೆ ಹೇಗೆ?ನಿಮ್ಮ ಮೊಬೈಲ್‌ನಲ್ಲಿ ಈಗ ಗೂಗಲ್ ಪ್ಲೇ ಸ್ಟೋರ್ ಲಭ್ಯವಿರುವಂತೆ ಇಂಡಸ್ ಆ್ಯಪ್‌ಸ್ಟೋರ್ ಸಿಗುವುದಿಲ್ಲ. ಅದಕ್ಕಾಗಿ ನೀವು ಗೂಗಲ್‌ನಲ್ಲಿ Indusappstore.com ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಆ್ಯಪ್‌ಸ್ಟೋರ್ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಯಿದೆ. ಬಳಿಕ ಮೊಬೈಲ್ ಸಂಖ್ಯೆ ನಮೂದಿಸಿ ರಿಜಿಸ್ಟರ್ ಮಾಡಿದರೆ ಇಂಡಸ್ ಆ್ಯಪ್‌ಸ್ಟೋರ್ ನಿಮ್ಮ ಬಳಕೆಗೆ ಲಭ್ಯ.