ಸಾರಾಂಶ
ಕಾನ್ಪುರ: ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ತಾನು ಮೃತಪಟ್ಟಿದ್ದಾಗಿ ಇತ್ತೀಚೆಗೆ ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ನಟಿ, ಮಾಡೆಲ್ ಪೂನಂ ಪಾಂಡೆ ಮತ್ತು ಆಕೆಯ ಮಾಜಿ ಪತಿ ಸ್ಯಾಮ್ ಬಾಂಬೆ ವಿರುದ್ಧ ಬರೋಬ್ಬರಿ 100 ಕೋಟಿ ರು. ಮಾನಹಾನಿ ಪ್ರಕರಣ ದಾಖಲಿಸಲಾಗಿದೆ.
ಫೈಜಾನ್ ಅನ್ಸಾರಿ ಎಂಬುವರು ಈ ಪ್ರಕರಣ ದಾಖಲಿಸಿದ್ದು, ಇವರು ಉತ್ತರ ಪ್ರದೇಶದ ಕಾನ್ಪುರದಲ್ಲಿ ದಾವೆ ಹೂಡಿ, ಇಬ್ಬರ ಬಂಧನಕ್ಕೆ ಒತ್ತಾಯಿಸಿದ್ದಾರೆ.ಪೂನಂ, ಕ್ಯಾನ್ಸರ್ ರೋಗದ ಗಂಭೀರತೆಯನ್ನು ಕ್ಷುಲ್ಲಕಗೊಳಿಸಿದ್ದಾರೆ ಮತ್ತು ಲಕ್ಷಾಂತರ ಜನರ ಭಾವನೆಗಳು ಮತ್ತು ನಂಬಿಕೆಯೊಂದಿಗೆ ಆಟವಾಡಿದ್ದಾರೆ. ತನ್ನ ವೈಯಕ್ತಿಕ ಪ್ರಚಾರಕ್ಕಾಗಿ ಪೂನಂ ತಾನು ಸತ್ತಿರುವಂತೆ ಸುಳ್ಳು ಸುದ್ದಿ ಹಬ್ಬಿಸಿದರು ಮತ್ತು ಲಕ್ಷಾಂತರ ಭಾರತೀಯರು ಮತ್ತು ಇಡೀ ಬಾಲಿವುಡ್ ಉದ್ಯಮದ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಫೈಜಾನ್ ಆರೋಪಿಸಿದ್ದಾರೆ.ಕಳೆದ ಫೆ.2ರಂದು ಗರ್ಭಕಂಠದ ಕ್ಯಾನ್ಸರ್‌ಗೆ ಪೂನಂ ಬಲಿಯಾಗಿದ್ದಾರೆ ಎಂದು ಅವರ ಮ್ಯಾನೇಜರ್, ಸ್ವತ ಪೂನಂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಒಂದು ದಿನದ ಬಳಿಕ ಪ್ರತ್ಯಕ್ಷವಾದ ಪೂನಂ ‘ನಾನು ಸತ್ತಿಲ್ಲ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಹೀಗೆ ಮಾಡಿದೆ’ ಎಂದರು. ಬಳಿಕ ಅವರ ವಿರುದ್ಧ ಆಕ್ರೋಶ ವ್ಯಕ್ತವಾಯಿತು.