ಸಾರಾಂಶ
ಕಿರಣ್ ರಾಜ್ ನಾಯಕನಾಗಿ ನಟಿಸಿರುವ ‘ರಾನಿ’ ಚಿತ್ರದ ‘ಕೋಲೆ ಕೋಲೆ’ ಎನ್ನುವ ಜಾನಪದ ಶೈಲಿಯ ಮಾಸ್ ಹಾಡು ಟಿ ಸಿರೀಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. 10 ಲಕ್ಷಕ್ಕೂ ಅಧಿಕ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಈ ಸಲದ ಶಿವರಾತ್ರಿ ಹಬ್ಬದಂದು ಚಿತ್ರದ ನಾಯಕ ನಟ ಕಿರಣ್ರಾಜ್ ಪ್ರಪಂಚದಲ್ಲಿ ಅತೀ ಎತ್ತರದಲ್ಲಿರುವ ಶಿವನ ಮಂದಿರ ಉತ್ತರಕಾಂಡದ ತುಂಗನಾಥ್ ದೇವಸ್ಥಾನಕ್ಕೆ ಹೋಗಿ ಅಭಿಮಾನಿಗಳಿಗೆ ಶುಭಕೋರಿದ್ದು ವಿಶೇಷವಾಗಿತ್ತು. ಸದ್ಯ ಸಿನಿಮಾದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು ಸದ್ಯದಲ್ಲೇ ಚಿತ್ರತಂಡ ಬಿಡುಗಡೆಯ ದಿನಾಂಕ ಘೋಷಿಸಲಿದೆ. ಗುರುತೇಜ್ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಉಮೇಶ ಹೆಗ್ಡೆ, ಚಂದ್ರಕಾಂತ್ ಪೂಜಾರಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸಮೀಕ್ಷಾ, ರಾಧ್ಯ, ಅಪೂರ್ವ ಮೂವರು ನಾಯಕಿಯರಿದ್ದಾರೆ. ರವಿಶಂಕರ, ಮೈಕೋ ನಾಗರಾಜ್, ಗಿರೀಶ್ ಹೆಗ್ಡೆ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್, ಧರ್ಮೇಂದ್ರ ಅರಸ್, ಉಗ್ರಂ ಮಂಜು, ಯಶ್ ಶೆಟ್ಟಿ ನಟಿಸಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನ, ಪ್ರಮೋದ ಮರವಂತೆ ಗೀತರಚನೆ ಹಾಗೂ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತವಿದೆ. ರಾಘವೇಂದ್ರ ಬಿ ಕೋಲಾರ ಛಾಯಾಗ್ರಾಹಕರು.