ಸಾರಾಂಶ
ರಚನಾ ಇಂದರ್, ಗೌತಮ್, ವಂಶಿಕಾ ನಟನೆಯ ನಾಲ್ಕನೇ ಆಯಾಮ ಸಿನಿಮಾ ಇಂದು (ಏ.19) ಬಿಡುಗಡೆ ಆಗುತ್ತಿದೆ.
‘ಪ್ರೇಮ ಗೀಮ ಜಾನೆದೋ’ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಗೌತಮ್ ಆರ್ ಈ ಬಾರಿ ನಟನೆ ಜೊತೆ ನಿರ್ದೇಶನವನ್ನೂ ಮಾಡಿದ ಸಿನಿಮಾ ‘ನಾಲ್ಕನೇ ಆಯಾಮ’ ಇಂದು ಬಿಡುಗಡೆ ಆಗುತ್ತಿದೆ. ಚಿತ್ರದಲ್ಲಿ ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದು, ಮಾಸ್ಟರ್ ಮಂಜುನಾಥ್ ಪುತ್ರಿ ವಂಶಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ರೊಮ್ಯಾಂಟಿಕ್ ಕತೆಯ ಮೂಲಕ ಆರಂಭವಾಗುವ ಸಿನಿಮಾಗೆ ಮುಂದೆ ವಿಶಿಷ್ಟ ತಿರುವುಗಳು ಸಿಗುತ್ತವೆ, ಅಲ್ಲಿಂದ ಕತೆ ಹಾರರ್ ಥ್ರಿಲ್ಲರ್ ಆಗಿ ಬದಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಟ್ರೇಲರ್ ಸಿನಿಮಾ ನೋಡುವ ಕುತೂಹಲ ಹೆಚ್ಚಿಸಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನಿಮಾದ ಹಾಡುಗಳೂ ಯೂಟ್ಯೂಬ್‌ನಲ್ಲಿ ಮಿಲಿಯನ್ ವೀಕ್ಷಣೆ ಕಂಡಿವೆ.ಅರುಣಾ ಮುತ್ತು ರಾಯಪ್ಪ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಿರಣ್ ರಾಯಚೋಟಿ, ದಿವ್ಯಾ ಸಜೋಗ್ ನಿರ್ಮಾಣದಲ್ಲಿ ಅವರಿಗೆ ಸಾಥ್ ನೀಡಿದ್ದಾರೆ. ಯಶಸ್ವಿನಿ ಎಂ, ಅಮಿತ್ ಗೌಡ, ಬಲ ರಾಜವಾಡಿ, ವಿನ್ಸೆಂಟ್, ಮಂಜು ಸ್ವಾಮಿ, ಚಂದ್ರಕಲಾ ಮೋಹನ್, ಬೇಬಿ ನಿಷಿತಾ ತಾರಾಬಳಗದಲ್ಲಿದ್ದಾರೆ.
ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ಮತ್ತು ಸೌಂಡ್ ಡಿಸೈನ್ ಮಾಡಿದ್ದಾರೆ. ಕೆ ಭ್ರಮೇಂದ್ರ ಹಾಗೂ ಅರುಣ್ ಛಾಯಾಗ್ರಹಣದ ಹೊಣೆ ನಿರ್ವಹಿಸಿದ್ದಾರೆ. ಉಗ್ರಂ ಶ್ರೀಕಾಂತ್ ಸಂಕಲನ ಮಾಡಿದ್ದಾರೆ.