ಸಾರಾಂಶ
ಮಂಡ್ಯ : ಧನುಷ್ ಕಂಬೈನ್ಸ್ ಬ್ಯಾನರ್‌ನಡಿ ಬಹು ತಾರಾಗಣದ ರಾಜದ್ರೋಹಿ ಕನ್ನಡ ಚಿತ್ರವು ಏ.10 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರ ನಿರ್ದೇಶಕ ಸಮರ್ಥ್‌ರಾಜ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ರಾಜದ್ರೋಹಿ ಚಿತ್ರದಲ್ಲಿ ಅದ್ಧೂರಿ ತಾರಾಗಣವಿದೆ. ಹಲವು ವರ್ಷಗಳ ನಂತರ ಅನಂತ್‌ನಾಗ್, ಲಕ್ಷ್ಮೀ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಶರಣ್, ಅಚ್ಯುತ್‌ಕುಮಾರ್, ಒರಟ ಪ್ರಶಾಂತ್, ಅಜಿತ್, ಯೋಗಿ ಸೇರಿದಂತೆ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ ಎಂದರು.
ಮಂಡ್ಯ ಮೂಲದ ನಿರ್ದೇಶಕ ಹಾಗೂ ನಿರ್ಮಾಪಕರೇ ನಿರ್ಮಿಸಿರುವ ಈ ಚಿತ್ರ ಏ.10 ರಂದು ಬಿಡುಗಡೆಗೊಳ್ಳಲಿದ್ದು. ಈ ಚಿತ್ರದ ಹೆಸರು ಡಾ.ರಾಜಕುಮಾರ್ ನಟನೆಯ ಮಯೂರ ಚಿತ್ರದ ಮೊದಲ ಹೆಸರಾಗಿತ್ತು. ತದನಂತರದಲ್ಲಿ ಬದಲಾವಣೆ ಮಾಡಲಾಗಿತ್ತು, ಮೊದಲ ಬಾರಿಗೆ ರಾಜದ್ರೋಹಿ ಹೆಸರಿನಲ್ಲಿ ಚಿತ್ರ ನಿರ್ಮಾಣವಾಗಿದೆ ಎಂದರು.
ರಾಜದ್ರೋಹಿ ಚಿತ್ರಕ್ಕೆ3 ಕೋಟಿ 25 ಲಕ್ಷ ರು. ವ್ಯಯಿಸಲಾಗಿದ್ದು, ಮಂಡ್ಯ, ಮೈಸೂರು, ತುಮಕೂರು ಹಾಗೂ ಚಾಮರಾಜನಗರಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.
ಚಲನಚಿತ್ರ ಬಿಡುಗಡೆ ದಿನಾಂಕ ಘೋಷಣೆಯ ಪೋಸ್ಟರ್ ಬಿಡುಗಡೆ ಮಾಡಿದ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿ, ನಿರ್ಮಾಪಕ ಮಹದೇವಯ್ಯ, ನಿರ್ದೇಶಕ ಸಮರ್ಥ್‌ರಾಜ್ ಇಬ್ಬರೂ ಮಂಡ್ಯದವರೇ ಆಗಿರುವುದು ಹೆಮ್ಮೆಯ ವಿಷಯ. ಮಂಡ್ಯದಲ್ಲಿ ಹಲವು ಚಿತ್ರನಟರು, ಕಲಾವಿದರನ್ನು ಬೆಂಬಲಿಸಿ ಬೆಳೆಸಿದ್ದು. ರಾಜದ್ರೋಹಿ ಚಲನಚಿತ್ರವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನಿರ್ಮಾಪಕ ಮಹದೇವಯ್ಯ, ಕಲಾವಿದ ಡಿಟಿಪಿ ಸೂರಿ, ಧನುಷ್ ಗೋಷ್ಠಿಯಲ್ಲಿದ್ದರು.