5 ವರ್ಷ ಸರ್ಕಾರ ಬೀಳಲ್ಲ: ರೇವಣ್ಣ ಭವಿಷ್ಯ!

| Published : Feb 26 2024, 01:37 AM IST / Updated: Feb 26 2024, 12:06 PM IST

5 ವರ್ಷ ಸರ್ಕಾರ ಬೀಳಲ್ಲ: ರೇವಣ್ಣ ಭವಿಷ್ಯ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಲು ಬಂದ ಮಾಕೇನ್‌ಗೆ ಶಾಕ್‌ ಆಗಿದ್ದೇಕೆ? ಹಾಗೂ 5 ವರ್ಷ ಸರ್ಕಾರ ಬೀಳಲ್ಲ ಎಂದು ನಿಂಬೆಹಣ್ಣು ಖ್ಯಾತಿಯ ರೇವಣ್ಣ ಭವಿಷ್ಯ ಹೇಳಿರುವ ಕುರಿತು ಪತ್ರಕರ್ತರ ಕಿವಿಗೆ ಬಿದ್ದಿರುವ ಸ್ವಾರಸ್ಯಕರ ಘಟನೆಗಳು ಇಲ್ಲಿವೆ.

ಶ್ರೀಕಾಂತ್‌ ಗೌಡಸಂದ್ರ ಯಾವ ಪಕ್ಷದ್ದೇ ಸರ್ಕಾರವಿರಲಿ, ಯಾರೇ ಮುಖ್ಯಮಂತ್ರಿ ಬಜೆಟ್‌ ಮಂಡಿಸಲಿ, ಅದಕ್ಕೆ ಬಹುತೇಕ ಮುಹೂರ್ತ ಫಿಕ್ಸ್‌ ಮಾಡುವುದು ಮಾಜಿ ಸಚಿವ ಎಚ್.ಡಿ.ರೇವಣ್ಣ ಎಂಬುದು ವಿಧಾನಸೌಧದಲ್ಲಿ ಪ್ರತೀತಿ.

ಹಿಂದೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ ಮಂಡಿಸಲು ಯಡಿಯೂರಪ್ಪ ಅಡ್ಡಿ ಮಾಡಿದ್ದರು. ಆಗ ನಾನೇ ಮುಹೂರ್ತ ಇಟ್ಟು ಯಾಕೆ ಅಂಗೀಕಾರ ಆಗುವುದಿಲ್ಲ ನೋಡೋಣ ಎಂದಿದ್ದೆ ಎಂದು ರೇವಣ್ಣ ಅವರು ಸದನದಲ್ಲೇ ಹೇಳಿದ್ದರು. 

2019ರಲ್ಲಿ ಕುಮಾರಸ್ವಾಮಿ ಬಜೆಟ್‌ಗೂ ಅವರೇ ಮುಹೂರ್ತ ಇಟ್ಟಿದ್ದನ್ನು ರೇವಣ್ಣ, ಕುಮಾರಸ್ವಾಮಿ ಸದನದಲ್ಲೇ ಹೇಳಿಕೊಂಡಿದ್ದರು.ಈ ಶುಭ, ಅಶುಭ ಗಳಿಗೆಗಳನ್ನು ಅಷ್ಟಾಗಿ ನಂಬದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್‌ ಮಂಡನೆಗೆ ಫೆ.16ರಂದು ಬೆಳಗ್ಗೆ 10.15 ಗಂಟೆಗೆ ಸಮಯ ನಿಗದಿಯಾಗಿತ್ತು. 

10.30ರ ಬಳಿಕ ರಾಹುಕಾಲ ಆರಂಭವಾಗುವ ಹಿನ್ನೆಲೆಯಲ್ಲಿ ಈ ಮುಹೂರ್ತ ಫಿಕ್ಸ್‌ ಆಗಿದೆ ಎಂಬ ಮಾತೂ ಕೇಳಿ ಬಂದಿತ್ತು.ಈ ಬಗ್ಗೆ ಕುತೂಹಲ ತಾಳಲಾರದೆ, ‘ಸಿದ್ದರಾಮಯ್ಯ ಅವರ ಬಜೆಟ್‌ ಮಂಡನೆಗೆ ನೀವೇ ಮುಹೂರ್ತ ಇಟ್ಟಿರಂತೆ ಹೌದಾ?’ ಎಂದು ಆಡಳಿತ ಪಕ್ಷದ ಸದಸ್ಯರು ವಿಧಾನ ಸಭೆಯಲ್ಲಿ ರೇವಣ್ಣ ಅವರ ಕಾಲೆಳೆದರು.

ಆಗ ಸೊಂಟದ ಮೇಲಿನ ಪಂಚೆ ಕಟ್ಟು ಬಿಗಿ ಮಾಡಿಕೊಳ್ಳುತ್ತಲೇ ಪ್ರತಿಕ್ರಿಯಿಸಿದ ಎಚ್.ಡಿ.ರೇವಣ್ಣ, ‘ಏನು ಅಂದ್ಕೊಂಡಿದ್ದೀರಿ? ಇದು ಒಳ್ಳೆಯ ಟೈಮು. 

ನೋಡ್ತಾ ಇರಿ ಈ ಐದು ವರ್ಷ ಸರ್ಕಾರಕ್ಕೆ ಏನೂ ಆಗಲ್ಲ’ ಎಂದು ಹೇಳಿಯೇ ಬಿಟ್ಟರು. ಪಾಪ ಲೋಕಸಭೆ ಚುನಾವಣೆ ನಂತರ ಸರ್ಕಾರ ಬಿದ್ದು ಬಿಡುತ್ತದೆ ಎಂದೆಲ್ಲ ಅಲವತ್ತುಕೊಳ್ಳುತ್ತಿದ್ದ ಕೆಲವು ಮುಖಂಡರು ಮಾತ್ರ ಪೆಚ್ಚಾದರು.

ಅಜಯ್‌ ಮಾಕೆನ್‌ಗೆ ಡಬ್ಬಲ್ ಶಾಕ್‌ !

ಗಿರೀಶ್‌ ಗರಗ

ಅಪ್ಪ ಒಂದು ಪಕ್ಷ, ಮಗ ಒಂದು ಪಕ್ಷದ ಶಾಸಕ ಇಲ್ಲವೇ ಸಂಸತ್‌ ಸದಸ್ಯನಾಗುವುದು, ಅಣ್ಣ-ತಮ್ಮ ಬೇರೆ ಬೇರೆ ಪಕ್ಷದಲ್ಲಿರುವುದು ಹೊಸದೂ ಅಲ್ಲ, ಇಂತಹ ಕಾಲ ಯಾವಾಗೋ ರಾಜ್ಯಕ್ಕೆ ಬಂದಿದೆ. 

ಶಾಕ್‌ ಆಗುವ ವಿಚಾರವಂತೂ ಅಲ್ಲವೇ ಅಲ್ಲ. ಆದರೆ ಇಂತಹ ಶಾಕ್‌ಗೆ ರಾಜ್ಯಸಭೆಯ ಕಾಂಗ್ರೆಸ್‌ ಅಭ್ಯರ್ಥಿ ಅಜಯ್‌ ಮಾಕೆನ್‌ ಒಳಗಾಗಿದ್ದು ಮಾತ್ರ ಸುಳ್ಳಲ್ಲ.ಆಗಿದ್ದಿಷ್ಟು.

ಬಹುಮತ ಹೊಂದಿದ್ದರೂ ಸಹ ಸಾಂಪ್ರದಾಯಕವಾಗಿ ಚುನಾವಣೆ ಕಾರಣ ಅಜಯ್‌ ಮಾಕೆನ್‌ ತಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಲು ವಿಧಾನಸಭೆ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್‌ ಅವರ ಜತೆಗೆ ವಿಧಾನಸೌಧದ ಆಡಳಿತ ಪಕ್ಷದ ಮೊಗಸಾಲೆಗೆ ಬಂದಿದ್ದರು. 

ಮೊಗಸಾಲೆಯಲ್ಲಿ ಕುಳಿತಿದ್ದ ಶಾಸಕರ ಬಳಿಗೆ ಅಜಯ್‌ ಮಾಕೆನ್‌ ಅವರನ್ನು ಕರೆತಂದು, ಶಾಸಕರ ಪರಿಚಯ ಮಾಡಿಕೊಡುತ್ತಿದ್ದರು.ಆಗ ಅಲ್ಲೇ ಇದ್ದ ಮಡಿಕೇರಿ ಶಾಸಕ ಮಂಥರ್‌ ಗೌಡ ಅವರನ್ನು ಪರಿಚಯಿಸಿದ ಅಶೋಕ್‌ ಪಟ್ಟಣ್‌, ‘ಇವರು ನಮ್ಮ ಯುವ ಶಾಸಕರು. 

ಮಡಿಕೇರಿ ಕ್ಷೇತ್ರದಿಂದ ಆಯ್ಕೆ ಮಾಡಿದ್ದಾರೆ’ ಎಂದು ಪರಿಚಯಿಸಿದರು. ಜತೆಗೆ ‘ಇವರ ತಂದೆ ಕೂಡ ಶಾಸಕರೇ’ ಎಂದು ಹೇಳಿದರು. ಅದಕ್ಕೆ ಅಜಯ್‌ ಮಾಕೇನ್‌, ‘ಹೌದಾ.. ಯಾವ ಕ್ಷೇತ್ರದಿಂದ’ ಎಂದು ಮರು ಪ್ರಶ್ನಿಸಿದರು.

ಅಶೋಕ್‌ ಪಟ್ಟಣ್‌, ‘ಆದರೆ, ಅವರು ಜೆಡಿಎಸ್‌ ಪಕ್ಷದ ಶಾಸಕರು’ ಎಂದು ಹೇಳಿದರು. ಅದೇ ವೇಳೆ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಅವರಿದ್ದಲ್ಲಿಗೆ ಬಂದರು. 

ಆಗ ಅಶೋಕ್‌ ಪಟ್ಟಣ್‌, ‘ಇವರು ಶರತ್‌ ಎಂದು, ಇವರು ನಮ್ಮ ಯುವ ಶಾಸಕರಲ್ಲಿ ಒಬ್ಬರು. ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಸಂದರ್ಭದಲ್ಲಿ ಅವರ ಭಾಷಣವನ್ನು ಇವರೇ ಕನ್ನಡಕ್ಕೆ ಭಾಷಾಂತರ ಮಾಡುತ್ತಿದ್ದರು ಎಂದು ಹೇಳಿ ಸ್ವಲ್ಪ ಗ್ಯಾಪ್‌ ಕೊಟ್ಟು, ಇವರ ತಂದೆ ಕೂಡ ಲೋಕಸಭಾ ಸದಸ್ಯರು ಎಂದು ಹೇಳಿದರು. 

ಅದಕ್ಕೆ ಅಜಯ್‌ ಮಾಕೇನ್‌, ‘ಯಾರು ಅದು’ ಎಂದು ಅಚ್ಚರಿಯಿಂದಲೇ ಪ್ರಶ್ನಿಸಿದರು. ಅದಕ್ಕೆ ಅಶೋಕ್‌ ಪಟ್ಟಣ್‌ ನಸುನಗುತ್ತಾ, ‘ಇವರ ತಂದೆ ಬಿಜೆಪಿಯಿಂದ ಎಂಪಿ ಆಗಿದ್ದಾರೆ’ ಎಂದರು.

ಈ ಡಬಲ್‌ ಶಾಕ್‌ಗೊಳಗಾದ ಅಜಯ್‌ ಮಾಕೆನ್‌, ‘ಈ ರೀತಿ ಒಂದೇ ಮನೆಯಲ್ಲಿ ಬೇರೆ ಬೇರೆ ಪಕ್ಷದ ಇಬ್ಬರು ಜನಪ್ರತಿನಿಧಿಗಳಿರುವುದು ಕರ್ನಾಟಕದಲ್ಲಿ ಮಾತ್ರ ಸಾಧ್ಯ ಬಿಡಿ. ಬೇರೆ ರಾಜ್ಯಗಳಲ್ಲಿ ಕಾಣಸಿಗುವುದಿಲ್ಲ’ ಎಂದು ಹೇಳಿ ಸಾವರಿಸಿಕೊಂಡರು.