ಗರುಡ ಪುರಾಣದ ಅಂಶಗಳಿರುವ ಸಿನಿಮಾ ರುದ್ರ ಗರುಡ ಪುರಾಣದ ಫಸ್ಟ್ ಲುಕ್‌ ರಿಲೀಸ್‌ ಆಗಿದೆ.

ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರದ ಫಸ್ಟ್ ಲುಕ್ ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಾಯಕ ರಿಷಿ, ‘ಇದೊಂದು ಇನ್‌ವೆಸ್ಟಿಗೇಶನ್‌ ಥ್ರಿಲ್ಲರ್‌. ಒಂದು ಸಣ್ಣ ಕಿಡ್ನಾಪ್‌ ಕೇಸ್‌ ಮೂಲಕ ಕತೆ ತೆರೆದುಕೊಳ್ಳುತ್ತದೆ. ರುದ್ರ ಎಂಬ ಇನ್‌ವೆಸ್ಟಿಗೇಟಿವ್‌ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಅನೇಕ ಅಂಶಗಳು ಸಿನಿಮಾದಲ್ಲಿ ಬರುತ್ತದೆ. ಹೀಗಾಗಿ ಚಿತ್ರಕ್ಕೆ ಈ ಶೀರ್ಷಿಕೆ ನೀಡಲಾಗಿದೆ. ಇದರ ಜೊತೆಗೆ ಪೊಲೀಸ್‌ ಡಿಪಾರ್ಟ್‌ಮೆಂಟ್‌ನ ಅನೇಕ ಸೂಕ್ಷ್ಮಗಳನ್ನೂ ಸಿನಿಮಾದಲ್ಲಿ ತರುವ ಪ್ರಯತ್ನ ಮಾಡಿದ್ದೇವೆ’ ಎಂದಿದ್ದಾರೆ.

ಈ ಚಿತ್ರದಲ್ಲಿ ಪ್ರಿಯಾಂಕ ಕುಮಾರ್ ನಾಯಕಿ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ ತಾರಾಗಣದಲ್ಲಿದ್ದಾರೆ. ಅಶ್ವಿನಿ ಲೋಹಿತ್ ನಿರ್ಮಾಪಕರು. ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ.