ಸಾರಾಂಶ
ಚಿತ್ರರಂಗ ಮತ್ತೆ ಗೆಲುವಿನ ಹಳಿಗೆ ಮರಳುವ ಸೂಚನೆ ನೀಡಿದೆ. ‘ಭೀಮ’ ಸಿನಿಮಾದಿಂದ ಆರಂಭವಾದ ಗೆಲುವಿನ ಹಾದಿಗೆ ‘ಕೃಷ್ಣಂ ಪ್ರಣಯ ಸಖಿ’ ಮತ್ತು ‘ಗೌರಿ’ ಸೇರಿಕೊಂಡಿವೆ. ಇದರ ನಡುವೆ ಕೆಜಿಎಫ್ ಮತ್ತು ಕಾಂತಾರ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದ್ದರಿಂದ ಚಿತ್ರರಂಗ ಖುಷಿಯಲ್ಲಿದೆ.
ಸಿನಿವಾರ್ತೆ
ಸ್ಯಾಂಡಲ್‌ವುಡ್‌ನಲ್ಲಿ ಹಬ್ಬದ ರಂಗೇರಿದೆ. ಚಿತ್ರರಂಗ ಮತ್ತೆ ಗೆಲುವಿನ ಹಳಿಗೆ ಮರಳುವ ಸೂಚನೆ ನೀಡಿದೆ. ‘ಭೀಮ’ ಸಿನಿಮಾದಿಂದ ಆರಂಭವಾದ ಗೆಲುವಿನ ಹಾದಿಗೆ ‘ಕೃಷ್ಣಂ ಪ್ರಣಯ ಸಖಿ’ ಮತ್ತು ‘ಗೌರಿ’ ಸೇರಿಕೊಂಡಿವೆ. ಇದರ ನಡುವೆ ಕೆಜಿಎಫ್ ಮತ್ತು ಕಾಂತಾರ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದ್ದರಿಂದ ಚಿತ್ರರಂಗ ಖುಷಿಯಲ್ಲಿದೆ.
ದುನಿಯಾ ವಿಜಯ್ ನಟನೆ, ನಿರ್ದೇಶನದ ‘ಭೀಮ’ ಕಳೆದೆರಡು ವಾರಗಳಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೌಸ್‌ಫುಲ್ ಪ್ರದರ್ಶನ ಮುಂದುವರಿದಿದೆ. ಮೊದಲ ವಾರವೇ ಚಿತ್ರ ₹25 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ತಂಡವೇ ಹೇಳುತ್ತಿದೆ.
ಗಣೇಶ್ ನಟನೆಯ, ಶ್ರೀನಿವಾಸರಾಜು ನಿರ್ದೇಶನದ ರೋಮ್‌ಕಾಮ್ ‘ಕೃಷ್ಣಂ ಪ್ರಣಯ ಸಖಿ’ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮನರಂಜನೆಯ ಫ್ಯಾಮಿಲಿ ಪ್ಯಾಕ್ ಎಂದೇ ಕರೆಸಿಕೊಂಡ ಈ ಸಿನಿಮಾ ಮೊದಲ ದಿನವೇ ಉತ್ತಮ ಕಲೆಕ್ಷನ್ ಮಾಡಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಚಿತ್ರದ ಸಮರಜಿತ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ಪ್ರದರ್ಶನ ಆಶಾದಾಯಕವಾಗಿದೆ. ಕೋಟ್
ಕಳೆದ ಕೆಲವು ಸಮಯದಿಂದ ಪಿವಿಆರ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಕಳೆದೆರಡು ವಾರ ಬಿಡುಗಡೆಯಾಗಿರುವ ಸಿನಿಮಾಗಳಿಗೆ ಜನ ಬರುತ್ತಿದ್ದಾರೆ. ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ ‘ಗೌರಿ’ ಸಿನಿಮಾ ದಿನೇ ದಿನೇ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
- ಜ್ಯೋತಿ ಕುಮಾರ್, ಪಿವಿಆರ್ ಉಪ ವ್ಯವಸ್ಥಾಪಕ
*
‘ಭೀಮ’ ರಿಲೀಸ್ ಆದಾಗ ಗೆಲುವಿನ ಹಾದಿಗೆ ಮರಳಬೇಕಾದ ಹೊಣೆಗಾರಿಕೆ ಇತ್ತು. ಈಗ ಅದನ್ನು ಯಶಸ್ವಿಗೊಳಿಸಿದ ಖುಷಿ ಇದೆ. ಶೋಗಳು ಹೌಸ್‌ಫುಲ್ ಆಗ್ತಿರೋದು ನೋಡಿದ್ರೆ ಇನ್ನೊಂದು ತಿಂಗಳು ಸಿನಿಮಾ ಥಿಯೇಟರ್‌ನಲ್ಲಿರುವ ಭರವಸೆ ಇದೆ.
- ಕೃಷ್ಣ ಸಾರ್ಥಕ್, ‘ಭೀಮ’ ಚಿತ್ರದ ನಿರ್ಮಾಪಕ