ಸಾರಾಂಶ
‘ಅಪ್ಪ ಸುದೀಪ್ ಜೊತೆ ನಾನು ತೆರೆ ಮೇಲೆ ಕಾಣಿಸಿಕೊಳ್ಳೋದು ನಿಮಗಿಷ್ಟನಾ?’
ಸುದೀಪ್ ಮಗಳು, ಗಾಯಕಿ ಸಾನ್ವಿ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಪ್ರಶ್ನೆ ಎಸೆದಿದ್ದಾರೆ.
‘ಸುದೀಪ್ ಜೊತೆ ಸಿನಿಮಾದಲ್ಲಿ ನಟಿಸುವಿರಾ?’ ಎಂಬ ನೆಟ್ಟಿಗರ ಪ್ರಶ್ನೆಗೆ ಸಾನ್ವಿ, ಅವರನ್ನೇ ಮರು ಪ್ರಶ್ನೆ ಮಾಡಿದ್ದಾರೆ. ಆ ಮೂಲಕ ಜನ ಇಷ್ಟಪಟ್ಟರೆ ನಟಿಸುವ ಮನಸ್ಸಿದೆ ಅನ್ನುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಸುದೀಪ್ ಅವರು ಸಂವಾದದಲ್ಲಿ ಪಾಲ್ಗೊಂಡು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡರು. ‘ನಿಮ್ಮನ್ನು ಬಿಗ್‌ಬಾಸ್ ಮನೆಯೊಳಗೆ ನೋಡಬೇಕು ಅನಿಸುತ್ತದೆ’ ಎಂಬ ಮಾತಿಗೆ, ‘ನಿಮ್ಮ ಆಸೆ ಫಲಿಸೋದು ಕಷ್ಟ ಅನಿಸುತ್ತೆ’ ಎಂದ ಸಾನ್ವಿ, ತಂದೆ ನಟನೆಯ ‘ವಿಷ್ಣುವರ್ಧನ’ ಬಹಳ ಇಷ್ಟ ಪಡುವ ಸಿನಿಮಾ. ‘ಕೆಂಪೇಗೌಡ’ ಚಿತ್ರದ ‘ಹಳೇ ರೇಡಿಯೋ’ ಹಾಡು ಬಹಳ ಇಷ್ಟ ಎಂದು ಹೇಳಿದ್ದಾರೆ.
‘ನಿಮ್ಮ ಮೂಗುತಿ ಕ್ಯೂಟ್ ಆಗಿದೆ. ಚುಚ್ಚಿಸಿಕೊಳ್ಳುವಾಗಿನ ಅನುಭವ ಹೇಗಿತ್ತು?’ ಎಂದು ಕೇಳಿದ ಅಭಿಮಾನಿಗೆ, ‘ಮೂಗು ಚುಚ್ಚಿಸಿಕೊಂಡಿದ್ದು ನನ್ನ ಬೆಸ್ಟ್ ನಿರ್ಧಾರ. ಆ ಕ್ರೇಜ್ ಎಷ್ಟಿತ್ತು ಅಂದರೆ ನೋವೇ ನನ್ನ ಅನುಭವಕ್ಕೆ ಬರಲಿಲ್ಲ’ ಎಂದಿದ್ದಾರೆ. ಇದರ ಜೊತೆಗೆ ತಾನು ಟ್ಯಾಟೂ ಪ್ರಿಯೆಯಾಗಿದ್ದು ಆರು ಬಾರಿ ಟ್ಯಾಟೂ ಹಾಕಿಸಿ ಹಾಕಿಸಿಕೊಂಡಿರೋದಾಗಿಯೂ ತಿಳಿಸಿದ್ದಾರೆ.
ಜೊತೆಗೆ ತಾನು ತೂಕ ಇಳಿಸಿಕೊಂಡಿರುವ ಫೋಟೋವನ್ನೂ ಶೇರ್ ಮಾಡಿದ್ದಾರೆ. ತಾನೇ ಪೇಂಟಿಂಗ್ ಮಾಡಿರುವ ಸುದೀಪ್ ಪೇಂಟಿಂಗ್ ಅನ್ನೂ ಶೇರ್ ಮಾಡಿದ್ದಾರೆ. ಗಾಯಕಿಯಾಗಿ ತೊಡಗಿಸಿಕೊಂಡಿರುವ ಸಾನ್ವಿ ತನ್ನ ಮುಂದಿನ ಪ್ರಾಜೆಕ್ಟ್ ಬಗ್ಗೆ ಶೀಘ್ರ ಅಪ್‌ಡೇಟ್ ನೀಡುವುದಾಗಿಯೂ ಈ ಮಾತುಕತೆ ವೇಳೆ ತಿಳಿಸಿದ್ದಾರೆ.