ಸಾರಾಂಶ
ಚಿತ್ರ: ಸಾರಾಂಶ
ತಾರಾಗಣ: ದೀಪಕ್ ಸುಬ್ರಹ್ಮಣ್ಯ, ಸೂರ್ಯ ವಸಿಷ್ಠ, ಶ್ರುತಿ ಹರಿಹರನ್, ಆಸಿಫ್ ಕ್ಷತ್ರಿಯ, ರವಿ ಭಟ್, ನಿರ್ದೇಶನ: ಸೂರ್ಯ ವಸಿಷ್ಠರೇಟಿಂಗ್ : 3.5- ಪ್ರಿಯಾ ಕೆರ್ವಾಶೆ‘ಮಗೂ, ನೀನು ಸ್ವರ್ಗವನ್ನು ನೋಡಿಲ್ಲವಲ್ಲ, ಅದು ಹೇಗಿರುತ್ತೆ ಅಂತ ನಿನಗೆ ಹೇಗೆ ಗೊತ್ತು?’‘ನನ್ನ ಸ್ವರ್ಗ ಎಂದರೆ ಅದು ಸಮುದ್ರ.’ಸ್ಟಾಫ್ ರೂಮ್‌ನಲ್ಲಿ ನಾಯಕ ತೇಜಸ್ವಿ ಪಂಡಿತ್ ಮತ್ತು ಟೀಚರ್ ನಡುವೆ ನಡೆಯುವ ಸಂಭಾಷಣೆ ಇದು. ಈ ಕ್ಯಾನ್ವಾಸ್ ಮೇಲೆ ಸಮುದ್ರದ ಅಲೆಗಳ ಹಾಗೆ ಮುಂದೆ ಬರುತ್ತ, ಹಿಂದೆ ಸರಿಯುತ್ತಾ ಸಾಗುವ ಸಿನಿಮಾ ಮುಗಿಯದ ಕತೆಯಾಗುತ್ತದೆ. ಲೇಖಕನಾಗಬೇಕು ಎಂದು ಹಪಹಪಿಸುವ ತೇಜಸ್ವಿ ಒಬ್ಬ ಚಾರ್ಟರ್ಡ್ ಅಕೌಂಟೆಂಟ್. ಬಾಲ್ಯದಲ್ಲಿ ಆತನ ಮೌನ, ಅಸಹನೀಯತೆಗೆ ಬಣ್ಣ ತುಂಬುವುದು ಕಲ್ಪನೆಗಳು, ಕವಿತೆಗಳು. ವರ್ತಮಾನದಲ್ಲಿ ಈ ಬಣ್ಣಗಳೇ ಪ್ರಕ್ಷುಬ್ಧ ಸಮುದ್ರದ ಹಾಗೆ ಆತನನ್ನು ಕಾಡುತ್ತವೆ. ಆತ ಬರೆದ ಕಥೆಯ ಪಾತ್ರಗಳು ಅಭಯ್, ಮಾಯಾ. ಕೆಲವೊಮ್ಮೆ ಈ ಪಾತ್ರಗಳೇ ನೇರವಾಗಿ ಪ್ರೇಕ್ಷಕರ ಜೊತೆಗೆ ಮಾತಾಡಿ ಲೇಖಕನ ದ್ವಂದ್ವವನ್ನು ಪ್ರೇಕ್ಷಕರಿಗೂ ದಾಟಿಸುತ್ತವೆ. ಹೀಗೊಂದು ಮಾಯಾ ವಾಸ್ತವದಲ್ಲಿ ಯಾವ ಬಾಗಿಲು ತೆರೆದರೆ ಯಾವ ವ್ಯಕ್ತಿಗಳು ಎದುರಾಗುತ್ತಾರೋ ಎಂಬ ಅನುಭವ ಸಿನಿಮಾದುದ್ದಕ್ಕೂ ಆವರಿಸುತ್ತದೆ. ಕೊನೆ ಮಾತ್ರ ಈ ಅನುಭವಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ. ಅಸಂಗತ ಚಿತ್ರಗಳ ಸರಣಿಯ ಹಾಗೆ ಒಂಭತ್ತು ಅಧ್ಯಾಯಗಳಲ್ಲಿ ಚಿತ್ರ ತೆರೆದುಕೊಳ್ಳುತ್ತದೆ. ಪ್ರತೀ ಅಧ್ಯಾಯವೂ ವಾಸ್ತವ, ಅವಾಸ್ತವಗಳ ಪರದೆಯ ಹಿಂದೆ ಅವಿತಿರುತ್ತವೆ. ನಿರ್ದೇಶಕ ಸೂರ್ಯ ವಸಿಷ್ಠ ಸಿನಿಮಾವನ್ನು ಅನುಭವವಾಗಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ವಿಕ್ಷಿಪ್ತ ಒಂಟಿ ಹುಡುಗನಾಗಿ ದೀಪಕ್ ಸುಬ್ರಹ್ಮಣ್ಯ ಅವರದು ನೆನಪಿಟ್ಟುಕೊಳ್ಳಬಹುದಾದಂಥಾ ಅಭಿನಯ. ಅಭಯ್ ಪಾತ್ರದಲ್ಲಿ ಸೂರ್ಯ, ತಂದೆಯಾಗಿ ಆಸಿಫ್, ಮಾಯಾ ಆಗಿ ಶ್ರುತಿ ಸೇರಿ ಎಲ್ಲ ಪಾತ್ರಧಾರಿಗಳೂ ನ್ಯಾಯ ಸಲ್ಲಿಸಿದ್ದಾರೆ. ಉದಿತ್ ಸಂಗೀತ ಹಿತವಾಗಿದೆ. ಅನಂತ್ ಭಾರಧ್ವಾಜ್ ಸಿನಿಮಾಟೋಗ್ರಫಿಯಲ್ಲಿ ಮ್ಯಾಜಿಕ್ ಇದೆ. ಒಟ್ಟಾರೆ ಮಾಯಾ ವಾಸ್ತವದಲ್ಲಿ ಬದುಕಿನ ಏರಿಳಿತಗಳನ್ನು ಹಿಡಿದಿಡುವ ಈ ಚಿತ್ರ ತನ್ನ ಉದ್ದೇಶದಲ್ಲಿ ಈಡೇರಿಸುವಲ್ಲಿ ಸಫಲವಾಗಿದೆ.