ಶಿವರಾಜ್‌ಕುಮಾರ್‌ ಅವರ ಬೆಳ್ಳಿತೆರೆಯ ಪಯಣಕ್ಕೆ ಇದೀಗ 40 ವರ್ಷಗಳ ಸಂಭ್ರಮ. 1986ರಲ್ಲಿ ಜೂನ್‌ ತಿಂಗಳ 19ರಂದು ತೆರೆಗೆ ಬಂದ   ಸಂಗೀತಂ ಶ್ರೀನಿವಾಸ್‌ರಾವ್‌ ನಿರ್ದೇಶನದ ‘ಆನಂದ್‌’ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಬಂದ ಶಿವಣ್ಣ

 ಸಿನಿವಾರ್ತೆ

ಶಿವರಾಜ್‌ಕುಮಾರ್‌ ಅವರ ಬೆಳ್ಳಿತೆರೆಯ ಪಯಣಕ್ಕೆ ಇದೀಗ 40 ವರ್ಷಗಳ ಸಂಭ್ರಮ. 1986ರಲ್ಲಿ ಜೂನ್‌ ತಿಂಗಳ 19ರಂದು ತೆರೆಗೆ ಬಂದ ಸಿಂಗೀತಂ ಶ್ರೀನಿವಾಸ್‌ರಾವ್‌ ನಿರ್ದೇಶನದ ‘ಆನಂದ್‌’ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಬಂದ ಶಿವಣ್ಣ, ಹ್ಯಾಟ್ರಿಕ್‌ ಹೀರೋ, ಸೆಂಚುರಿ ಸ್ಟಾರ್‌, ಸ್ಯಾಂಡಲ್‌ವುಡ್‌ ಕಿಂಗ್‌, ಕರುನಾಡ ಚಕ್ರವರ್ತಿ... ಹೀಗೆ ಅಭಿಮಾನದ ಬಿರುದು ಹೊತ್ತು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈ ಸಂದರ್ಭದಲ್ಲಿ ‘ಶ್ರೀಮುತ್ತು’ ಹೆಸರಿನಲ್ಲಿ ಶಿವಣ್ಣ ಜೀವನ ಚರಿತ್ರೆಯನ್ನು ಹೇಳುವ ಪುಸ್ತಕ ಕೂಡ ಅಮೆರಿಕದಲ್ಲಿ ಬಿಡುಗಡೆ ಆಗಿದೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಖ್ಯಾತ ನಟರು ಶಿವಣ್ಣನಿಗೆ ಶುಭ ಕೋರಿದ್ದಾರೆ.

ನಿಮ್ಮ 40 ವರ್ಷಗಳ ಅದ್ಭುತ ಚಲನಚಿತ್ರ ಪ್ರಯಾಣದ ಒಂದು ಭಾಗವನ್ನು ಹತ್ತಿರದಿಂದ ನೋಡಿ, ಅನುಭವಿಸೋ ಅವಕಾಶ ಪಡೆದಿರುವುದು, ನನಗೆ ಅತ್ಯಂತ ಗೌರವದ ವಿಷಯ. ನೀವು ಈ ಚಿತ್ರರಂಗಕ್ಕೆ ಕುಗ್ಗದ ಆಸಕ್ತಿ, ಅಪಾರ ಶ್ರಮ ಮತ್ತು ಘನತೆಯಿಂದ ಸೇವೆ ಸಲ್ಲಿಸಿದ್ದೀರಿ. ನೀವು ಸ್ಥಾಪಿಸಿದ ಮಾದರಿ ಭವಿಷ್ಯದಲ್ಲಿ ಹಲವು ಪೀಳಿಗೆಗಳಿಗೆ ಪ್ರೇರಣೆಯಾಗಲಿದೆ. ನೀವು ಯಶಸ್ಸನ್ನು ಸದಾ ಸರಳವಾಗಿ ನಿಭಾಯಿಸಿದ್ದೀರಿ, ಆದರೆ ಎಲ್ಲಕಿಂತ ಮಿಗಿಲಾಗಿ, ನೀವು ಸದಾ ಒಬ್ಬ ಉತ್ತಮ ಮನುಷ್ಯರಾಗಿ ಬಾಳಿದ್ದೀರಿ. ನಿಮ್ಮ ಆರೋಗ್ಯ ಸದಾ ಉತ್ತಮವಾಗಿರಲಿ ಮತ್ತು ಇನ್ನೂ ಹಲವಾರು ವರ್ಷಗಳ ಕಾಲ ನಿಮ್ಮ ಅಭಿನಯದಿಂದ ನಮಗೆ ಮನರಂಜನೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.

- ಕಿಚ್ಚ ಸುದೀಪ್‌

ನಲವತ್ತು ವರ್ಷ ಅಂದರೆ ದೊಡ್ಡ ಜರ್ನಿ. ಬಹು ದೊಡ್ಡ ಸಾಧನೆ ನಿಮ್ಮದು. ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ಯುವ ಪ್ರತಿಭೆಗಳಿಗೆ ನೀವು ಪ್ರೇರಣೆ. ಮುಂದೆ 50ನೇ ವರ್ಷದ ಸಂಭ್ರಮವನ್ನು ನಿಮ್ಮ ಜತೆಗೆ ಅದ್ದೂರಿಯಾಗಿ ಮಾಡಿಕೊಳ್ಳೋಣ.

- ಡಾಲಿ ಧನಂಜಯ

40 ವರ್ಷಗಳು ಕಳೆದರೂ ಟಾಪ್‌ 1 ನಟರಾಗಿ ಬೇಡಿಕೆಯಲ್ಲಿರೋದು ತಮಾಷೆಯಲ್ಲ. ನಾನು ನಿಮ್ಮನ್ನು ಮೊದಲು ನೋಡಿದ್ದು ‘ಬೀಸ್ಟ್‌’ ಚಿತ್ರದ ಸೆಟ್‌ನಲ್ಲಿ. ಆಗ ನಿಮ್ಮನ್ನು ನೋಡಿ ಇವರ ಜತೆಗೆ ಒಂದು ಸೀನ್‌ನಲ್ಲಾದರೂ ಕೆಲಸ ಮಾಡಬೇಕು ಅನ್ನಿಸಿತ್ತು. ಅದಕ್ಕೆ ‘ಜೈಲರ್‌’ನಲ್ಲಿ ನಾವು ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಮತ್ತೆ ನಾವು ಜತೆಯಾಗಿ ಕೆಲಸ ಮಾಡೋಣ.

- ನೆಲ್ಸನ್, ನಿರ್ದೇಶಕ

ಶಿವಣ್ಣ, ನೀವು ಎಂದರೆ ಪಾಸಿಟಿವ್‌ ವೈಬ್‌. ನಿಮ್ಮ ಇಡೀ ಕುಟುಂಬವೇ ಅದ್ಭುತ. ನಾವು ಇಬ್ಬರು ಜತೆಯಾಗಿ ಚಿತ್ರದಲ್ಲಿ ಕೆಲಸ ಮಾಡಿಲ್ಲ. ಆದರೆ, ಜಾಹೀರಾತಿನಲ್ಲಿ ಕೆಲಸ ಮಾಡಿದ್ದೇವೆ. ಆ ಸವಿ ನೆನಪುಗಳು ನನ್ನ ಜತೆಗಿವೆ.

- ಅಕ್ಕಿನೇನಿ ನಾರ್ಜುನ

ಶಿವಣ್ಣ ನನ್ನ ವಯಸ್ಸು 35. ನೀವು ಚಿತ್ರರಂಗಕ್ಕೆ ಬಂದೇ 40 ವರ್ಷಗಳಾಗಿವೆ. ನಾನು ನಿಮ್ಮ ಮುಂದೆ ಚಿಕ್ಕವನು. ನಿಮಗೆ ಶುಭಾಶಯ ಹೇಳುವಷ್ಟು ದೊಡ್ಡವನಲ್ಲ. ಆದರೂ ನಿಮ್ಮ ಅಭಿಮಾನಿಯಾಗಿ ನಾನು ಶುಭ ಕೋರುತ್ತಿದ್ದೇನೆ.

- ಧ್ರುವ ಸರ್ಜಾ, ನಟ

ಕನ್ನಡ ಕಂಠೀರವ ಡಾ. ರಾಜ್‌ಕುಮಾರ್‌ ಅವರ ಜತೆಗೆ ನನಗೆ ವಿಶೇಷ ಸ್ನೇಹ ಇತ್ತು. ಅವರು ಒಂದು ರೀತಿಯಲ್ಲಿ ನನಗೆ ತಂದೆಯ ಸಮಾನರು. ಹಾಗೆ ನನಗೆ ಶಿವಣ್ಣ, ಅಪ್ಪು, ರಾಘಣ್ಣ ಕೂಡ ಗೊತ್ತು. ಇದು ನನ್ನ ಮತ್ತೊಂದು ಕುಟುಂಬದಂತೆ. ಶಿವಣ್ಣ ಸ್ಟಾರ್‌ನಿಂದ ಸೂಪರ್‌ ಸ್ಟಾರ್‌ ಆಗಿದ್ದು ನೋಡಿದರೆ ನನಗೆ ಹೆಮ್ಮೆ ಆಗುತ್ತದೆ. ತಂದೆಯವರ ಲೆಗಸಿ ಮುಂದುವರಿಸುತ್ತಲೇ ತಮ್ಮದೇ ಆದ ಸ್ಟಾರ್‌ಡಮ್‌ ಕಟ್ಟಿಕೊಂಡವರು. ಅದ್ಭುತ ಜರ್ನಿ.

- ಚಿರಂಜೀವಿ

ಶಿವಣ್ಣ ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾಷೆಗಳನ್ನು ಮೀರಿದ ನಟರು. ನಾನು ಯಾವಾಗ ಬೆಂಗಳೂರಿಗೆ ಹೋದರೂ ತುಂಬಾ ಪ್ರೀತಿಯಿಂದ ನನ್ನ ಬರಮಾಡಿಕೊಳ್ಳುತ್ತಾರೆ. ನನಗೆ ಶಿವಣ್ಣ ಅವರಲ್ಲಿ ಈ ಪ್ರೀತಿ ಮತ್ತು ಗೌರವಗಳು ತುಂಬಾ ಇಷ್ಟ.

- ನಾನಿ

7 ವರ್ಷಗಳ ಹಿಂದೆ ನಾನು ನಿಮ್ಮನ್ನು ಭೇಟಿ ಮಾಡಿದ್ದು ನೆನಪಿದೆ. ನಿಮ್ಮ ಗೌರವ, ಪ್ರೀತಿ, ಸ್ವಾಗತವನ್ನು ನಾನು ನೋಡಿದ್ದೇನೆ. ನಿಮ್ಮ ಈ ಸಾಧನೆಗೆ ಅಭಿನಂದನೆಗಳು ಅಂತ ಹೇಳಿದರೆ ತುಂಬಾ ಕಡಿಮೆ.

- ವಿಜಯ್‌ ದೇವರಕೊಂಡ