ಸಾರಾಂಶ
ಮೊದಲೆಲ್ಲ ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಅದಕ್ಕೆ ಉಗೀಲಿಕ್ಕಾದ್ರೂ ಜನ ಥೇಟರ್‌ಗೆ ಬರ್ತಿದ್ರು. ಆದರೆ ಈಗ ಹೊಗಳಿದ್ರೂ ಬರ್ತಿಲ್ಲ ಎಂದು ನಿರ್ದೇಶಕ ಸಿಂಪಲ್ ಸುನಿ ಇಂದಿನ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ್ದಾರೆ. ದಿಲ್ ಖುಷ್ ಸಿನಿಮಾದ ಹಾಡುಗಳನ್ನು ಸುನಿ ಬಿಡುಗಡೆ ಮಾಡಿದರು.
ಕನ್ನಡಪ್ರಭ ಸಿನಿವಾರ್ತೆ
‘ಮೊದಲು ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಉಗೀಲಿಕ್ಕಾದ್ರೂ ಜನ ಥಿಯೇಟರ್‌ಗೆ ಬರ್ತಿದ್ರು. ಈಗ ಹೊಗಳಿದ್ರೂ ಬರ್ತಿಲ್ಲ. ನಾವೆಲ್ಲಾ ಒಂದು ಬಗೆಯ ದುರಾದೃಷ್ಟಕರ ಸನ್ನಿವೇಶದಲ್ಲಿದ್ದೇವೆ. ಇತ್ತೀಚೆಗೆ ನನ್ನ ಸಿನಿಮಾದ ಟಿವಿ ಹಕ್ಕು ಮಾರಾಟವಾಯಿತು. ಅದನ್ನು ಎಲ್ಲರೆದುರು ಹೇಳಲೂ ಭಯವಾಗುತ್ತೆ. ಹೇಗೂ ಟಿವಿಯಲ್ಲಿ ಬರುತ್ತಲ್ವಾ, ಅಲ್ಲೇ ನೋಡ್ತೀವಿ ಅಂತ ಥಿಯೇಟರ್‌ಗೆ ಬರದೇ ಹೋದರೆ ಅಂತ ಭಯ.’ಹೀಗೆ ತಮ್ಮ ಆತಂಕ ತೋಡಿಕೊಂಡಿದ್ದು ನಿರ್ದೇಶಕ ಸಿಂಪಲ್ ಸುನಿ. ಅವರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರಮೋದ್ ಜಯ ನಿರ್ದೇಶನದ ‘ದಿಲ್‌ಖುಷ್’ ಸಿನಿಮಾದ ಹಾಡುಗಳನ್ನು ಸುನಿ ಬಿಡುಗಡೆ ಮಾಡಿದರು. ನಿರ್ದೇಶಕ ಚೇತನ್ ಕುಮಾರ್, ಸುನಿ ಮಾತಿಗೆ ದನಿಗೂಡಿಸಿದರು. ಮತ್ತೊಬ್ಬ ನಿರ್ದೇಶಕ ಪವನ್ ಒಡೆಯರ್ ಚಿತ್ರತಂಡಕ್ಕೆ ಶುಭ ಹಾರೈಸಿದರು.ನಿರ್ದೇಶಕ ಪ್ರಮೋದ್ ಜಯ, ‘ಭಾವನಾತ್ಮಕವಾಗಿ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಸಿನಿಮಾ ದಿಲ್‌ಖುಷ್’ ಎಂದರು. ನಾಯಕ ರಂಜಿತ್, ‘ಇದು ಲವಲವಿಕೆಯ ಪ್ರೇಮಕಥೆ’ ಎಂದರು. ನಾಯಕಿ ಸ್ಪಂದನಾ ಸೋಮಣ್ಣ ದಿಲ್ಮಯಾ ಎಂಬ ಈ ಕಾಲದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು. ಕಲಾವಿದರಾದ ರಾಘು, ಧರ್ಮಣ್ಣ ಇದ್ದರು.