ನಟ ಪ್ರಕಾಶ್ ರೈ ಅವರ ನಿರ್ದಿಗಂತ ರಂಗ ಸಂಸ್ಥೆಯ ಬಗ್ಗೆ ಒಂದು ಕಿರು ನೋಟ.. ಸೀಮಾತೀತ ನಿರ್ದಿಗಂತ

| Published : Jul 21 2024, 01:24 AM IST / Updated: Jul 21 2024, 05:00 AM IST

Prakash raj in politics

ಸಾರಾಂಶ

ನಟ ಪ್ರಕಾಶ್ ರೈ ಅವರ ನಿರ್ದಿಗಂತ ರಂಗ ಸಂಸ್ಥೆಯ ಬಗ್ಗೆ ಒಂದು ಕಿರು ನೋಟ..

ರಾಜ್ಯ, ದೇಶ, ಭಾಷೆ, ಗಡಿ ದಾಟಿ ಬರುವ ವಲಸೆ ಹಕ್ಕಿಗಳಿಗೆ ಆಶ್ರಯ ಕೊಟ್ಟು ಅವು ಮತ್ತೆ ತಮ್ಮ ತಮ್ಮ ಊರಿನ ಗೂಡುಗಳಿಗೆ ಮರಳಿಸುವ ರಂಗನತಿಟ್ಟು ಪಕ್ಷಿದಾಮದಂತೆಯೇ ರಂಗದ ತಿಟ್ಟು ನಿರ್ದಿಗಂತ ಕೂಡ. ಅದು ಪಕ್ಷಿಕಾಶಿ, ಇದು ರಂಗ ಪ್ರತಿಭೆಗಳ ಗೂಡು. ರಂಗನತಿಟ್ಟು ಪಕ್ಷಿದಾಮ ಪ್ರಕೃತಿಯ ಮಡಿಲಲ್ಲಿದೆ. ಅದರ ಪಕ್ಕದಲ್ಲೇ ನಿರ್ದಿಗಂತವೂ ರೂಪುಗೊಂಡಿದೆ. ಈ ಎರಡರ ನಡುವೆ ಕೇವಲ 12 ಕಿ.ಮೀ ಅಂತರ.

ರಂಗದತಿಟ್ಟು ಪ್ರಕಾಶ್ ರೈ ಕನಸು. ಬಹುಶಃ ಇಂಥದ್ದೊಂದು ರಂಗಶಾಲೆ ಕಟ್ಟಿದ ಏಕೈಕ ನಟ ಪ್ರಕಾಶ್. ರಂಗಭೂಮಿಯಿಂದ ಬಂದ ಪ್ರಕಾಶ್ ರೈ, ಮತ್ತೆ ರಂಗಭೂಮಿಗೆ ಮರಳಲೇ, ನಾಟಕಗಳಲ್ಲಿ ನಟಿಸಲೇ, ನಾಟಕ ನಿರ್ದೇಶಿಸಲೇ ಅಂತೆಲ್ಲ ಯೋಚಿಸುತ್ತಿದ್ದಾಗ ಹೊಳೆದದ್ದು ನಿರ್ದಿಗಂತ ಎಂಬ ಸೀಮೆಯಿಲ್ಲದ ರಂಗಸಾಲೆ.

ನಿರ್ದಿಗಂತ ಎಲ್ಲಿದೆ?

ಬೆಂಗಳೂರಿನಿಂದ ಮೈಸೂರು ರಸ್ತೆಯ ಮೂಲಕ ಎರಡು ಕಾಲು ಗಂಟೆ ಪ್ರಯಾಣ ಮಾಡಿ ಮಂಡ್ಯ ದಾಟಿದ ನಂತರ 500 ಮೀಟರ್‌ ದೂರ ಕ್ರಮಿಸಿ, ಹೆದ್ದಾರಿಯನ್ನು ಬಿಟ್ಟು ಶ್ರೀರಂಗಪಟ್ಟಣದ ಕಡೆಗೆ ತಿರುಗಿ. ಶ್ರೀರಂಗಪಟ್ಟಣಕ್ಕೆ ಪ್ರವೇಶಿಸುವ ಮುನ್ನವೇ ಸಿಗುವ ಕೆ.ಶೆಟ್ಟಿಹಳ್ಳಿ ಬಸ್‌ ನಿಲ್ದಾಣದ ಪಕ್ಕದಲ್ಲೇ ಒಂದು ಕಾಲು ದಾರಿ ಹೋಗುತ್ತದೆ. ಆ ದಾರಿಯಲ್ಲಿ 150 ಮೀಟರ್‌ ಸಾಗಿದರೆ ಎಡಭಾಗದಲ್ಲಿ ಅರಳಿ ಮರ ಸಿಗುತ್ತದೆ. ಅದರ ಕೆಳಗೆ ನಿರ್ದಿಗಂತ ಬೋರ್ಡ್‌ ಕಾಣುತ್ತದೆ. ಅಲ್ಲಿಂದ 100 ಮೀಟರ್‌ ಸಾಗಿದರೆ ಲೋಕಪಾವನಿ ನದಿಯಂಚಿನಲ್ಲಿರುವ ನಿರ್ದಿಗಂತ ನಿಮ್ಮನ್ನು ಸ್ವಾಗತಿಸುತ್ತದೆ.

ನಿರ್ದಿಗಂತ ಹೇಗಿದೆ?

ಲೋಕಪಾವನಿ ನಂದಿಯಂಚಿನಲ್ಲಿ 5 ಎಕರೆ ಜಾಗದಲ್ಲಿರುವ ತೋಟ. ಈ ತೋಟದಲ್ಲಿ ತಲೆ ಎತ್ತಿರುವ ನಿರ್ದಿಗಂತ ಸುತ್ತ ಕಬ್ಬಿನ ವನ, ತೆಂಗಿನ ತೋಟಗಳು. ಕೆಂಪು ಇಟ್ಟಿಗೆ, ಹೆಂಚುಗಳನ್ನೇ ಬಳಸಿ ನಿರ್ದಿಗಂತಕ್ಕೊಂದು ರಂಗ ಗೂಡಿನ ರೂಪ ನೀಡಲಾಗಿದೆ. ಇಲ್ಲಿ ಬಳಕೆ ಆಗಿರುವ ಬಹುತೇಕ ವಸ್ತುಗಳು ಬಿಸಾಡಬಹುದಾದ ಮತ್ತು ವ್ಯರ್ಥ ಎನಿಸಿಕೊಂಡಿರುವ ವಸ್ತುಗಳೇ. ಹಳೆಯ ಮರದ ತುಂಡುಗಳು, ಬಳಕೆ ಆಗಿ ಉಳಿದಿರುವ ಬಣ್ಣಗಳು, ಬಿಸಾಡಿರುವ ಗ್ರ್ಯಾನೈಟ್ ಕಲ್ಲುಗಳು, ಬಿದಿರು, ಕಲ್ಲು ಬೆಂಚುಗಳು, ನೈಸರ್ಗಿಕವಾಗಿ ಸಿಗುವ ನೀರು, ಮಳೆ ನೀರು ವ್ಯರ್ಥವಾಗದಂತೆ ಸಂಗ್ರಹವಾಗಲು ಎರಡು ಚಿಕ್ಕ ಕೆರೆಗಳು, ನೂರಾರು ಜಾತಿಯ ಹೂ ಗಿಡಗಳು, ಹಣ್ಣಿನ ಮರಗಳು, ನಿತ್ಯ ಬಳಕೆಗಾಗಿ ವಿವಿಧ ರೀತಿಯ ಸೊಪ್ಪು, ತರಕಾರಿ ತೋಟ, ಮಣ್ಣು ಗೋಡೆಗಳಿಂದ ನಿರ್ಮಾಣಗೊಂಡಿರುವ ಸಣ್ಣ ಕೊಠಡಿಗಳು, ಸ್ವಿಮ್ಮಿಂಗ್‌ ಪೂಲ್‌, ನೀರು ಸೇದುವ ಹಳೆಯ ಬಾವಿ, ವಿಶಾಲವಾದ ಆಡಿಟೋರಿಯಂ, ಚಿತ್ರಕಲೆಗಾಗಿ ತೆರೆದ ಸಭಾಂಗಣ, ಕ್ಯಾಂಟೀನು... ಹೀಗೆ ಹತ್ತು ಹಲವು ವಿಶೇಷತೆಗಳನ್ನು ನಿರ್ದಿಗಂತ ಒಳಗೊಂಡಿದೆ.

ನಿರ್ದಿಗಂತದ ಸಾರಥಿಗಳು

ಪ್ರಕಾಶ್‌ ರೈ ಅವರು ನಿರ್ದಿಗಂತದ ಮುಖ್ಯ ಸೂತ್ರಧಾರರು. ಇಲ್ಲಿನ ರಂಗ ಚಟುವಟಿಕೆಗಳನ್ನು ರೂಪಿಸಿ, ಮುನ್ನೆಡೆಸುತ್ತಿರುವ ಮುಖ್ಯ ಪಾತ್ರಧಾರಿ ಡಾ ಶ್ರೀಪಾದ್‌ ಭಟ್‌. ಇವರ ಜತೆಗೆ ಶಾಲೋಮ್‍ ಸನ್ನುತ, ಮುನ್ನ ಮೈಸೂರು, ಸುಶ್ಮಿತಾ ಚೈತನ್ಯ, ಅನುಷ್‍ ಶೆಟ್ಟಿ, ಖಾಜು ಗುತ್ತಲ, ಅರುಣ ಲಾಲ್, ಕೀಲ್ ಅಹ್ಮದ್‌ ಮುಂತಾದ ಅದ್ಭುತ ಕಲಾವಿದರು ಜತೆಗಿದ್ದಾರೆ. ಈ ತನಕ ‘ಗಾಯಗಳು’, ‘ಕಾವ್ಯ ರಂಗ’, ‘ಮಂಟೇಸ್ವಾಮಿ ಕಾವ್ಯ ಪ್ರಯೋಗ’, ‘ಹಾಡುವ ಮರ’ ಸೇರಿದಂತೆ 9 ನಾಟಕಗಳು ನಿರ್ದಿಗಂತದ ಮೂಲಕ ರಾಜ್ಯದ ವಿವಿಧ ಕಡೆ ಪ್ರದರ್ಶಿಸಲಾಗಿದೆ.

ನಿರ್ದಿಗಂತದ ಯೋಜನೆಗಳೇನು?

ಯುವ ಸಮುದಾಯವನ್ನು ತಲುಪುವ ನಿಟ್ಟಿನಲ್ಲಿ ‘ಕಾಲೇಜು ರಂಗ’, ಶಾಲಾ ಮಕ್ಕಳಿಗಾಗಿ ‘ಶಾಲಾರಂಗ’, ಮಕ್ಕಳೊಡನೆ ರಂಗಪ್ರಯೋಗ ನಡೆಸಲು ‘ಶಾಲಾ ರಂಗವಿಕಾಸ’, ಈಗಿನ ಯುವ ನಿರ್ದೇಶಕರುಗಳ ಲೋಕ ಗ್ರಹಿಕೆಯನ್ನು ಅರಿಯಲು ಹಾಗೂ ಅವರ ಕನಸಿಗೆ ವೇದಿಕೆಯಾಗುವ ‘ರಂಗವಿಕಾಸ’ ಹೀಗೆ ನಾಲ್ಕು ಯೋಜನೆಗಳನ್ನು ರೂಪಿಸಲಾಗಿದೆ.

ಗುರಿ, ಉದ್ದೇಶಗಳೇನು?ರಂಗಭೂಮಿಯ ಸಿದ್ಧ ಮಾದರಿಗಳನ್ನು ದೂರವಿಟ್ಟು ಕನ್ನಡ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಸಂಶೋಧನಾ ಕೇಂದ್ರವಾಗಿ ಬೆಳೆಸುತ್ತಾ ಕನ್ನಡ ರಂಗಭೂಮಿಯನ್ನು ವಿಸ್ತರಿಸುವುದು ನಿರ್ದಿಗಂತದ ಮುಖ್ಯ ಗುರಿ. ರಂಗಭೂಮಿ, ನಟನೆಯಲ್ಲಿ ಡಿಪ್ಲೋಮೋ ಅಥವಾ ಬೇಸಿಕ್ ತರಬೇತಿ ಪಡೆದುಕೊಂಡವರ ಮುಂದಿನ ಬೆಳವವಣಿಗೆಗೆ ಜಾಗ ಮಾಡಿಕೊಂಡುವುದು ಇದರ ಉದ್ದೇಶ. ನಿರ್ದಿಗಂತ ಕೈಗೆತ್ತಿಕೊಳ್ಳುವ ರಂಗ ಯೋಜನೆಗಳಿಗೆ ಅಗತ್ಯವಾಗಿರುವ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡುವ ಜತೆಗೆ ಫೆಲೋಶಿಪ್‌ ಕೊಟ್ಟು ಅವರಿಂದ ರಂಗ ಪ್ರಯೋಗಗಳನ್ನು ಮಾಡಿಸಲಾಗುತ್ತದೆ.

ಇಲ್ಲಿ ಕೆಲಸ ಮಾಡಿದ ನಂತರ ಅವರು ಬೇರೆ ಯಾವುದಾದರೂ ರಂಗ ತಂಡ ಸೇರಿಕೊಳ್ಳಬಹುದು. ಅಥವಾ ಅವರೇ ಒಂದು ರಂಗತಂಡವನ್ನೂ ಕಟ್ಟಿಕೊಳ್ಳಬಹುದು. ನಿರ್ದೇಶಕನೊಬ್ಬ ತಾನು ಕಟ್ಟುವ ನಾಟಕಕ್ಕೆ 2 ಲಕ್ಷ ವೆಚ್ಚವಾದರೆ ಅದಕ್ಕೆ ನಿರ್ದಿಗಂತ 4 ಲಕ್ಷ ರುಪಾಯಿಗಳನ್ನು ಕೊಡುತ್ತದೆ. ಅಂದರೆ ನಾಟಕ ರೂಪಿಸಿ ಅದನ್ನು ಪ್ರಯೋಗಿಸಿದ ನಂತರವೂ ಆ ನಿರ್ದೇಶಕ ತನ್ನ ಮುಂದಿನ ರಂಗದಾರಿಯನ್ನು ನಿರ್ಮಿಸಿಕೊಳ್ಳಬೇಕೆಂಬ ಉದ್ದೇಶದಿಂದ ಹಣ ನೀಡಲಾಗುತ್ತದೆ.

ನಟನಾ ತರಬೇತಿ ಶಾಲೆಯಲ್ಲ

ನಿರ್ದಿಗಂತವು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಅವರಿಂದ ಶುಲ್ಕ ಪಡೆದು ನಟನಾ ತರಬೇತಿ ಮಾಡಿಸುವ ಶಾಲೆ ಅಥವಾ ಸಂಸ್ಥೆ ಅಲ್ಲ. ಇಲ್ಲಿ ನಾಟಕಗಳನ್ನು ಹೇಳಿಕೊಡುವ, ನಾಟಕಗಳನ್ನು ಆಡಿಸುವ ಜೊತೆಗೆ ರಂಗಭೂಮಿಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಕೆಲಸವನ್ನು ನಿರ್ದಿಗಂತ ಮಾಡುತ್ತದೆ. ಹಲವು ಕಡೆ ಕಲಿತು ಬಂದಿರುವ ಸಾಕಷ್ಟು ಪ್ರತಿಭಾವಂತರು ಇಲ್ಲಿದ್ದಾರೆ. ಅವರನ್ನು ಬಳಸಿಕೊಂಡು, ರಾಜ್ಯದ ಮೂಲೆಮೂಲೆಗಳಲ್ಲಿ ರಂಗಭೂಮಿಯನ್ನು ವಿಸ್ತರಿಸುವುದು ನಿರ್ದಿಗಂತದ ಅಡಿಪಾಯ.

ನಿರ್ದಿಗಂತದ ಮುಂದಿನ ಕನಸುಗಳು

ರಂಗಭೂಮಿ ಮತ್ತು ಶಿಕ್ಷಣ ಜತೆಯಾಗಬೇಕು. ಅಂದರೆ ಶಾಲಾ-ಕಾಲೇಜುಗಳಲ್ಲಿ ಕಲೆಗೆ ಅಂತಲೇ ಇಂತಿಷ್ಟು ಅಂಕಗಳು ಇವೆ. ಆದರೆ, ಅದಕ್ಕೆ ಬೇಕಾದ ರಂಗ ಪಠ್ಯವಿಲ್ಲ. ಹೀಗಾಗಿ ಶಿಕ್ಷಣದಲ್ಲಿ ರಂಗಪಠ್ಯವನ್ನು ರೂಪಿಸುವುದು ನಿರ್ದಿಗಂತದ ಬಹುದೊಡ್ಡ ಕನಸು. ಯುವ ಜನರು ಇದ್ದಲ್ಲಿಗೇ ಥಿಯೇಟರ್‌ ಚಲಿಸಬೇಕು. ಅವರನ್ನು ಒಳಗೊಂಡ ರಂಗ ಥಿಯೇಟರ್‌ಗಳನ್ನು ಕಟ್ಟಬೇಕು. ಮಕ್ಕಳ ನಾಟಕೋತ್ಸವ ಮಾಡುವುದು, ರಂಗಭೂಮಿ ಮತ್ತು ಸಾಹಿತ್ಯದ ನಡುವಿನ ನಂಟು ಕಡಿಮೆ ಆಗುತ್ತಿದೆ. ಹೀಗಾಗಿ ಸಾಹಿತ್ಯವನ್ನು ರಂಗಭೂಮಿಗೆ ತರುವ ಕೆಲಸ ಮಾಡುವುದು. ರಂಗ ವಿಮರ್ಶೆಯ ಪಾರಿಭಾಷಿಕ ಪದಕೋಶವನ್ನು ರೂಪಿಸುವುದು ಸೇರಿದಂತೆ ಹಲವು ಕನಸುಗಳು ನಿರ್ದಿಗಂತದ ಮುಂದಿವೆ.