ಭ್ರೂಣ ಹತ್ಯೆಯ ಕರಾಳತೆ ನಡುವೆ ಮಾನವೀಯತೆಯ ಟಿಸಿಲು ತೋರುವ ತಾರಿಣಿ ಸಿನಿಮಾ ವಿಮರ್ಶೆ

ಚಿತ್ರ: ತಾರಿಣಿ

ತಾರಾಗಣ: ರೋಹಿತ್‌ ಆರ್‌ ರಂಗಸ್ವಾಮಿ, ಮಮತಾ ರಾಹುತ್‌, ಸುಧಾ ಪ್ರಸನ್ನ, ಸುರೇಶ್‌ ಕೋಟ್ಯಾನ್‌ ಚಿತ್ರಾಪು, ಭವಾನಿ ಪ್ರಕಾಶ್‌

ನಿರ್ದೇಶನ: ಸಿದ್ದು ಪೂರ್ಣಚಂದ್ರ

ರೇಟಿಂಗ್‌: 3

- ಪೀಕೆಹೆಣ್ಣುಭ್ರೂಣ ಹತ್ಯೆ ಪಿಡುಗು ಬಹಳ ಹಳೆಯದು. ಆದರೆ ಇಂದಿನ ಈ ಅಲ್ಟ್ರಾ ಮಾಡರ್ನ್‌ ಯುಗದಲ್ಲೂ ಜೀವಂತವಾಗಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದನಿ ಎತ್ತುತ್ತಲೇ ಮಾನವೀಯ ಕಳಕಳಿಯನ್ನಿಟ್ಟು ಹೊರಬಂದಿರುವ ಚಿತ್ರ ‘ತಾರಿಣಿ’.

‘ಗಂಡು ಮಗು ಹುಟ್ಟಿದರೆ ವಯಸ್ಸಾದ ಮೇಲೆ ನಮ್ಮನ್ನು ನೋಡಿಕೊಳ್ಳುತ್ತಾನೆ. ಹೆಣ್ಣು ಮಗು ಹುಟ್ಟಿದರೆ ಆಕೆ ಮದುವೆ ಆಗಿ ಬೇರೆ ಮನೆ ಸೇರುತ್ತಾಳೆ. ನಮ್ಮ ಆಸ್ತಿ ಅಳಿಯನ ಪಾಲಾಗುತ್ತದೆ’ ಎಂಬುದು ಗಂಡನ ಮನಸ್ಥಿತಿ. ‘ಮಕ್ಕಳಲ್ಲಿ ಹೆಣ್ಣು, ಗಂಡು ಭೇದ ಇರುವುದಿಲ್ಲ. ಮಕ್ಕಳೆಲ್ಲ ಒಂದೇ’ ಎನ್ನುವ ಹೆಂಡತಿ. ಗಂಡು ಮಗುವಿಗಾಗಿ ಹೆಂಡತಿಯ ಕೊಲೆಗೂ ಹೇಸದ ಗಂಡ, ಮಗುವಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಅತೀ ಒಳ್ಳೆತನದ ಹೆಂಡತಿ.. ಈ ಕಾಂಟ್ರಡಿಕ್ಷನ್‌ನಲ್ಲೇ ಸಾಗುವ ಕಥೆಗೆ ಸೂಕ್ಷ್ಮ ಘಟನೆಯೊಂದು ತಿರುವು ನೀಡುತ್ತದೆ. ಆ ಘಟನೆ ಏನು, ಅದರಿಂದ ಆಗುವ ರೂಪಾಂತರಗಳೇನು ಎನ್ನುವುದನ್ನು ತಾರಿಣಿ ಚಿತ್ರದಲ್ಲಿ ನೋಡಬಹುದು.

ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡೆದಿರುವ ಸಾಮಾಜಿಕ ಕಳಕಳಿಯ ಚಿತ್ರವಿದು. ಇದರಲ್ಲಿ ಭ್ರೂಣ ಹತ್ಯೆಯ ಹಿಂದಿರುವ ಪುರುಷ ಪ್ರಧಾನ ಮನಸ್ಥಿತಿಯ ಬಗೆಗಿನ ಚಿತ್ರಣವಿದೆ. ಜೊತೆಗೆ ಅಂಥಾ ಕಲ್ಲು ಹೃದಯದಲ್ಲೂ ಮನುಷ್ಯ ಪ್ರೀತಿ ಟಿಸಿಲೊಡೆಯುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.

ರೋಹಿತ್ ರಂಗಸ್ವಾಮಿ, ಮಮತಾ ರಾಹುತ್‌, ಸುರೇಶ್‌ ಕೋಟ್ಯಾನ್‌ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಭವಾನಿ ಪ್ರಕಾಶ್‌, ಸುಧಾ ಪ್ರಸನ್ನ ಅವರದು ಉತ್ತಮ ಅಭಿನಯ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಗೊಂದಲಕ್ಕೆ ಅವಕಾಶವಿಲ್ಲದಂತೆ ಸರಳವಾಗಿ ಕಥೆ ನಿರೂಪಿಸಿದ್ದಾರೆ. ಸಾಮಾಜಿಕ ಸಂದೇಶ ಸಾರುವ ಸದಭಿರುಚಿಯ ಚಿತ್ರವಿದು.