ದರ್ಶನ್ ನಟನೆಯ ‘ದಿ ಡೆವಿಲ್’ ಇಂದು 550ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ ಬೆಳಿಗ್ಗೆ 6.05 ನಿಮಿಷಕ್ಕೆ ಮೊದಲ ಪ್ರದರ್ಶನ ಆರಂಭವಾಗಿದೆ. ಒಂದು ದಿನದಲ್ಲಿ ಸುಮಾರು 200 ಪ್ರದರ್ಶನ ಕಾಣುವ ಸಾಧ್ಯತೆ ಇದೆ.
ಸಿನಿವಾರ್ತೆ
ದರ್ಶನ್ ನಟನೆಯ ‘ದಿ ಡೆವಿಲ್’ ಇಂದು 550ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ ಬೆಳಿಗ್ಗೆ 6.05 ನಿಮಿಷಕ್ಕೆ ಮೊದಲ ಪ್ರದರ್ಶನ ಆರಂಭವಾಗಿದೆ. ಒಂದು ದಿನದಲ್ಲಿ ಸುಮಾರು 200 ಪ್ರದರ್ಶನ ಕಾಣುವ ಸಾಧ್ಯತೆ ಇದೆ.
ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿಯೇ ಸುಮಾರು 33 ಪ್ರದರ್ಶನಗಳನ್ನು ನಿಗದಿಪಡಿಸಲಾಗಿದೆ. ನಾಲ್ಕು ದಿನಗಳ ಹಿಂದೆಯೇ ಸಿಂಗಲ್ ಸ್ಕ್ರೀನ್‌ಗಳಿಗೆ ಮುಂಗಡ ಬುಕಿಂಗ್ ಆರಂಭವಾಗಿದ್ದರೂ ಮಲ್ಟಿಪ್ಲೆಕ್ಸ್‌ಗಳಲ್ಲಿ ನಿನ್ನೆ ಮಧ್ಯಾಹ್ನ 3.30ರ ಸುಮಾರಿಗಷ್ಟೇ ಬುಕಿಂಗ್ ತೆರೆಯಲಾಗಿದೆ. ಡೆವಿಲ್ ಸಿನಿಮಾಗೆ ನಿರೀಕ್ಷೆ ಹೆಚ್ಚಿರುವುದರಿಂದ ಗರಿಷ್ಠ ಟಿಕೆಟ್ ದರ 1200 ರು. ಇಡಲಾಗಿದೆ. ಈ ಸಿನಿಮಾ ಅವಧಿ 2 ಗಂಟೆ 49 ನಿಮಿಷ ಇದೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಇಂದು ನರ್ತಕಿ ಥೇಟರಿನಲ್ಲಿ ಅಭಿಮಾನಿಗಳೊಂದಿಗೆ ಮೊದಲ ಪ್ರದರ್ಶನ ವೀಕ್ಷಿಸಲಿದ್ದಾರೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ದರ್ಶನ್ ಬೃಹತ್ ಕಟೌಟ್ ನಿಲ್ಲಿಸಲಾಗಿದ್ದು, ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಗಿದೆ. ಸಿದ್ದೇಶ್ವರ ಚಿತ್ರಮಂದಿರದಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿ ತಂದು ಪೂಜೆ ಸಲ್ಲಿಸಲಾಗಿದೆ. ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ, ಜೋಗಿ ಪ್ರೇಮ್ ಸೇರಿದಂತೆ ಸೆಲೆಬ್ರಿಟಿಗಳು ದರ್ಶನ್ ಸಿನಿಮಾ ಬೆಂಬಲಿಸಿದ್ದಾರೆ.
ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದ ದರ್ಶನ್
ಈ ಸಂದರ್ಭದಲ್ಲಿ ದರ್ಶನ್ ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ‘ನನ್ನ ಪ್ರೀತಿಯ ಸೆಲೆಬ್ರಿಟೀಸ್, ನಿಮಗೆ ನೇರವಾಗಿ ಹೃದಯದಿಂದ ಈ ಸಂದೇಶ ನೀಡುತ್ತಿದ್ದೇನೆ. ನಿಮ್ಮ ಪ್ರತೀ ಸಂದೇಶವೂ ಪತ್ನಿ ವಿಜಿ ಮೂಲಕ ನನ್ನನ್ನು ತಲುಪುತ್ತಿದೆ. ನೀವು ಯಾವುದೇ ಗಾಳಿ ಸುದ್ದಿ, ವದಂತಿ, ನೆಗೆಟಿವ್ ವಿಚಾರಗಳಿಂದ ನಿಮ್ಮ ಹೃದಯಕ್ಕೆ ಘಾಸಿ ಮಾಡಿಕೊಳ್ಳಬೇಡಿ. ನೀವು ನನ್ನ ಮೇಲಿಟ್ಟಿರುವ ನಂಬಿಕೆಯಿಂದಲೇ ನಾನಿವತ್ತು ಗಟ್ಟಿಯಾಗಿ ನಿಲ್ಲುವುದು ಸಾಧ್ಯವಾಗಿದೆ. ನನ್ನ ನೀವೇ ನನ್ನ ಶಕ್ತಿ, ನೀವೇ ನನ್ನ ಕುಟುಂಬ. ಬದುಕಿನ ಈ ಹಂತದಲ್ಲಿ ನನ್ನ ಅತೀ ದೊಡ್ಡ ಶಕ್ತಿಯಾಗಿರುವಿರಿ. ಬೇಸರ ಮಾಡಿಕೊಳ್ಳದೇ ನಿಮ್ಮ ಶಕ್ತಿ, ಎನರ್ಜಿಯನ್ನು ಡೆವಿಲ್ ಸಿನಿಮಾಕ್ಕೆ ನೀಡಿರಿ’ ಎಂದು ಹೇಳಿದ್ದಾರೆ.
‘ನಾನು ನಾನಾಗಿರುವುದಕ್ಕೆ ಕಾರಣ ನೀವು. ನೀವು ನನ್ನ ಮೇಲಿಟ್ಟಿರುವ ನಂಬಿಕೆ, ಅಗಾಧ ಪ್ರೀತಿಯನ್ನು ಡೆವಿಲ್ ಸಿನಿಮಾ ಮೇಲೂ ಇಡುತ್ತೀರಿ ಅಂತ ತಿಳಿದಿದೆ. ನಿಮ್ಮನ್ನು ಮತ್ತೆ ನೋಡಲು ಕಾತರದಿಂದಿದ್ದೇನೆ. ನೀವು ಗೋಡೆಯಂತೆ ನನ್ನ ಸುತ್ತ ನಿಂತಿರುವಾಗ ನಿಮ್ಮ ಕಣ್ಣುಗಳನ್ನೇ ದಿಟ್ಟಿಸಿ ಕೃತಜ್ಞತೆ ಸಲ್ಲಿಸುವ ದಿನಕ್ಕೆ ಎದುರು ನೋಡುತ್ತಿದ್ದೇನೆ. ನೀವು ನನ್ನನ್ನು ನಂಬಿದಂತೆ, ನಾನು ನಿಮ್ಮನ್ನು ನಂಬುತ್ತೇನೆ. ಕಾಲ ಬಂದಾಗ ಸತ್ಯದ ಅರಿವು ಆಗಲೇ ಬೇಕು. ಅಲ್ಲಿಯವರೆಗೆ ಹೃದಯ, ಮನಸ್ಸು ಗಟ್ಟಿ ಮಾಡಿಕೊಂಡಿರಿ. ನಿಮ್ಮ ಪ್ರೀತಿ ಎಂದೂ ಅಲುಗಾಡದಂತಿರಲಿ’ ಎಂದೂ ದರ್ಶನ್ ಹೇಳಿದ್ದಾರೆ.
ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಸುಳ್ಳು: ವಿಜಯಲಕ್ಷ್ಮೀ ದರ್ಶನ್
ಇತ್ತೀಚೆಗೆ ಕೆಲವು ಮಾಧ್ಯಮದಲ್ಲಿ ಪ್ರಸಾರವಾಗಿದ್ದ ದರ್ಶನ್ ಇತರ ಖೈದಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿರುವ ಅವರು, ‘ಇಂದು ನಾನು ಜೈಲಿಗೆ ಭೇಟಿ ನೀಡಿದಾಗ, ನಾನು ಸ್ವತಃ ಅಧಿಕಾರಿಗಳೊಂದಿಗೆ, ನನ್ನ ಗಂಡನೊಂದಿಗೆ ಮತ್ತು ಅವರಿಂದ ದೌರ್ಜನ್ಯಕ್ಕೊಳಗಾದವರು ಎಂದು ಹೇಳಲಾಗುತ್ತಿರುವ ವ್ಯಕ್ತಿಗಳೊಂದಿಗೆ ನೇರವಾಗಿ ಮಾತನಾಡಿದೆ. ನನಗೆ ಸತ್ಯ ತಿಳಿದುಕೊಳ್ಳಬೇಕಿತ್ತು. ಎಲ್ಲರ ಮಾತುಗಳನ್ನು ಕೇಳಿದ ನಂತರ ಈ ಆರೋಪಗಳೆಲ್ಲಾ ಸುಳ್ಳು, ಯಾವುದೇ ಆಧಾರವಿಲ್ಲದ್ದು ಮತ್ತು ದ್ವೇಷದ ಉದ್ದೇಶದಿಂದ ಕೂಡಿದ್ದು ಎಂಬುದು ಸ್ಪಷ್ಟವಾಯಿತು’ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸತ್ಯವನ್ನು ಮಾತ್ರವೇ ಪ್ರಸಾರ ಮಾಡಿ ಎಂದೂ ಅವರು ಕೇಳಿಕೊಂಡಿದ್ದಾರೆ.

