ಇಳುವರಿ ಬಗ್ಗೆ ಯೋಚಿಸಿದವರು, ಮಣ್ಣಿನ ಬಗ್ಗೆ ಚಿಂತಿಸಲಿಲ್ಲ

| Published : Dec 25 2023, 01:31 AM IST / Updated: Dec 26 2023, 12:09 PM IST

ಇಳುವರಿ ಬಗ್ಗೆ ಯೋಚಿಸಿದವರು, ಮಣ್ಣಿನ ಬಗ್ಗೆ ಚಿಂತಿಸಲಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನೈಸರ್ಗಿಕ ಕೃಷಿ ಮತ್ತು ಮಣ್ಣು ಸಂರಕ್ಷಣೆ ಕುರಿತು ಸಾಧಕರೊಂದಿಗೆ ಸಂವಾದ.

ಮೈಸೂರು: ಯಾವ ಪ್ರಮಾಣದಲ್ಲಿ ರಾಸಾಯನಿಕ ಸುರಿದರೆ ಇಳುವರಿ ಹೆಚ್ಚಾಗುತ್ತದೆ ಎಂದು ಯೋಚಿಸಿದ ರೈತರು ಮಣ್ಣಿನ ಕಾಳಜಿ ಆಡಲಿಲ್ಲ ಎಂದು ಬೆಳವಲ ಫೌಂಡೇಷನ್ ಅಧ್ಯಕ್ಷ ಡಾ.ಕೆ. ರಾಮಕೃಷ್ಣಪ್ಪ ತಿಳಿಸಿದರು.

ಪರಿಸರ ಬಳಗ, ಸಹಜ ಸಮೃದ್ಧ, ಉಳುಮೆ ಪ್ರತಿಷ್ಠಾನ, ಬೆಳವಲ ಫೌಂಡೇಷನ್, ಎಚ್.ಸಿ. ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ, ಅಂಗಳ ಸಾಹಿತ್ಯ ಬಳಗದ ವತಿಯಿಂದ ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಭಾನುವಾರ ನೈಸರ್ಗಿಕ ಕೃಷಿ ಮತ್ತು ಮಣ್ಣು ಸಂರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಣ್ಣು, ಕೃಷಿ ಮತ್ತು ಪರಿಸರ ವಿಷಯ ಕುರಿತು ಅವರು ಮಾತನಾಡಿದರು.

ಜಾಗತಿಕ ತಾಪಮಾನ ಹೆಚ್ಚಲು ನಗರವಾಸಿಗಳು ಮಾತ್ರವಲ್ಲ, ರೈತರ ಕೊಡುಗೆಯೂ ಇದೆ. ಏಕೆಂದರೆ ರಾಸಾಯನಿಕ ಬಳಸಿ ಹೆಚ್ಚು ಬೆಳೆ ತೆಗೆಯುವ ಆಲೋಚನೆ ಮಾಡಿದರೆ ಹೊರತು ಮಣ್ಣಿನ ಬಗ್ಗೆ ಚಿಂತಿಸಲಿಲ್ಲ. ವ್ಯವಸಾಯದ ಭೂಮಿ ಫಲವತ್ತತೆಯಿಂದ ಇದ್ದರೆ ಉತ್ತಮ ಇಳುವರಿಯೂ ಬರುತ್ತದೆ ಎಂದು ಅವರು ಆಲೋಚಿಸಿದರು.

ರೈತರು ಯಾವ ಪ್ರಮಾಣದಲ್ಲಿ ರಾಸಾಯನಿಕ ಸುರಿದರೆ ಇಳುವರಿ ಹೆಚ್ಚಾಗುತ್ತದೆ. ವ್ಯವಸಾಯದ ಭೂಮಿ ಫಲವತ್ತತೆಯಿಂದ ಇದ್ದರೆ ಉತ್ತಮ ಇಳುವರಿಯೂ ಬರುತ್ತದೆ. ಉಳುಮೆಗೆ ಟ್ರಾಕ್ಟರ್ ಬಳಕೆಯಿಂದ ಭೂಮಿಯ ನೀರು ಇಂಗುವಿಕೆಯ ಶಕ್ತಿ ಹಾಳಾಗಿದೆ ಎಂದು ಅವರು ವಿವರಿಸಿದರು.

ಕೃಷಿ ಭೂಮಿಯ ಅಕ್ಕಪಕ್ಕದಲ್ಲಿ ಹಳ್ಳಕೊಳ್ಳ ಇರುತ್ತಿದ್ದವು. ಇದರಿಂದ ಭೂಮಿಯಲ್ಲಿ ತಂಪಾದ ವಾತಾವರಣ ಇರುತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಳ್ಳಕೊಳ್ಳಗಳು ನಾಶವಾಗಿ ಭೂಮಿಯ ಉಷ್ಣಾಂಶ ಏರಿಕೆ ಆಗುತ್ತಿದೆ. ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಸರ ವಿರೋಧಿ ಚಟುವಟಿಕೆ ನಡೆಯುತ್ತಿರುವ ಪರಿಣಾಮ ಜಾಗತಿಕ ತಾಪಮಾನ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ ಎಂದು ಅವರು ತಿಳಿಸಿದರು.

ಒಂದು ಅಗಲ ಭೂಮಿ ಬೆಳೆಯಬೇಕಾದರೆ 500 ರಿಂದ 600 ವರ್ಷ ಬೇಕು. ಆದರೆ, ವಾರದಲ್ಲಿ 8 ರಿಂದ 10 ಅಡಿ ಕೊಚ್ಚಿ ಹೋಗುತ್ತಿದೆ. ಹೀಗಾದರೆ ಮರ ಗಿಡ ಎಲ್ಲಿ ಬೆಳೆಯುತ್ತವೆ? ಪ್ರಕೃತಿ ವಿಕೋಪದಿಂದ ಮಣ್ಣು ನಾಶವಾಗುತ್ತಿದೆ. ಪರಿಸರಕ್ಕೆ ಮಾರಕವಾದ ಚಟುವಟಿಕೆಯಿಂದ ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಇದರಿಂದ ಅತ್ಯಮೂಲ್ಯವಾದ ಭೂಮಿಯ ಮೇಲ್ಪದರ ನಾಶವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ವಾರದಲ್ಲಿ 137 ಹೆಕ್ಟೇರ್ ಕಾಡು ನಾಶವಾಗುತ್ತಿದೆ. 1990 ರಿಂದ 2000 ವರೆಗೆ ದೇಶದಲ್ಲಿ 38,400 ಲಕ್ಷ ಹೆಕ್ಟೇರ್ ಕಾಡು ನಾಶವಾಗಿದೆ. 2015 ರಿಂದ 2020 ರವರೆಗೆ 6.68 ಲಕ್ಷ ಕಾಡು ನಾಶವಾಗಿದೆ. 2023ರ ಡಿ. 10 ರಿಂದ 17 ರವರೆಗೆ ಒಂದೇ ವಾರದಲ್ಲಿ 137 ಹೆಕ್ಟೇರ್ ಕಾಡು ನಾಶವಾಗಿದೆ. ಇದು ಕೇಂದ್ರ ಪರಿಸರ ಇಲಾಖೆ ಕೊಟ್ಟ ಮಾಹಿತಿ. ಈ ಪ್ರಮಾಣದಲ್ಲಿ ಕಾಡು ನಾಶ ಮಾಡಿದರೆ ಪ್ರವಾಹ, ಸುನಾಮಿ, ಭೂ ಕುಸಿತ ಸಂಭವಿಸುವುದನ್ನು ತಡೆಯಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ಸಾವಯವ ಕೃಷಿಕ ಡಾ.ಎ.ಪಿ. ಚಂದ್ರಶೇಖರ ಮಾತನಾಡಿ, ಮಣ್ಣಿಲ್ಲದೆ ಬದುಕಿಲ್ಲ ಎಂದು ಕಾರ್ಯಕ್ರಮ ನಡೆಸಿ ಹೇಳುವ ಪರಿಸ್ಥಿತಿ ಇರುವುದು ದುರ್ದೈವ. ಕೃಷಿ, ಕೈಗಾರಿಕೆ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ಆದಾಯ ಕೂಡಬಹುದು. ಆದರೆ ಆದಾಯ ಗುಣಿಸಲು ಹೊರಟರೆ ಪ್ರಕೃತಿ ಮೇಲೆ ಪರಿಣಾಮ ಬೀರಿ ಅನಾಹುತ ಸಂಭವಿಸುವುದು ನಿಶ್ಚಿತ ಎಂದರು.

ವೇದಿಕೆಯಲ್ಲಿ ತುಮಕೂರಿನ ಶಿವನಂಜಯ್ಯ ಬಾಳೇಕಾಯಿ, ಪರಿಸರ ಬಳಗ ಸದಸ್ಯ ಪರಶುರಾಮೇಗೌಡ ಮೊದಲಾದವರು ಇದ್ದರು.