ಸಾರಾಂಶ
ಪ್ರಿಯಾಂಕಾ ಉಗ್ರಾವತಾರವನ್ನು ಇಲ್ಲೀವರೆಗೆ ನಾನೊಬ್ಬನೇ ನೋಡಿದ್ದೆ. ಈಗ ಇಡೀ ಕರ್ನಾಟಕ ನೋಡ್ತಿದೆ ಎಂದು ಉಪೇಂದ್ರ ಹೆಂಡತಿಯ ಕಾಲೆಳೆದಿದ್ದಾರೆ.
‘ಪ್ರಿಯಾಂಕಾ ಉಗ್ರಾವತಾರವನ್ನು ಇಲ್ಲೀವರೆಗೆ ನಾನೊಬ್ಬನೇ ನೋಡಿದ್ದೆ. ಈಗ ಇಡೀ ಕರ್ನಾಟಕ ನೋಡ್ತಿದೆ. ಒಂದುವೇಳೆ ನಾನು ಈ ಸಿನಿಮಾ ನಿರ್ದೇಶನ ಮಾಡ್ತಿದ್ರೆ ಪ್ರಿಯಾಂಕಾ ಮುಖ ಡಲ್ ಕಾಣೋ ಹಾಗೆ ಮಾಡ್ತಿದ್ದೆ. ಹಿಂಗೆ ಗ್ಲಾಮರಸ್ ಪೊಲೀಸ್ ಆದ್ರೆ ಹೊಡಿಯಮ್ಮ ಪರ್ವಾಗಿಲ್ಲ ಅನ್ನಲ್ವಾ ರೌಡಿಗಳು. ಆದರೂ ಆಕೆಯದು ಯಾವತ್ತಿಗೂ ಕಡಿಮೆ ಆಗದಿರೋ ಗ್ಲಾಮರ್.’
- ಹೀಗಂದಿದ್ದು ರಿಯಲ್ ಸ್ಟಾರ್ ಉಪೇಂದ್ರ. ಪ್ರಿಯಾಂಕಾ ಉಪೇಂದ್ರ ನಟನೆಯ ‘ಉಗ್ರಾವತಾರ’ ಸಿನಿಮಾದ ಟ್ರೇಲರನ್ನು ಅವರು ಅನಾವರಣಗೊಳಿಸಿದರು. ‘ಜನ ಥಿಯೇಟರ್‌ಗೆ ಬಂದು ಆಶೀರ್ವಾದ ಮಾಡಿದರೆ ನೂರಾರು ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಹತ್ತಾರು ಕುಟುಂಬಗಳ ದೀಪ ಬೆಳಗುತ್ತದೆ. ಸಿನಿಮಾದಂಥಾ ಬೃಹತ್ ಪ್ರಾಜೆಕ್ಟ್‌ನಲ್ಲಿ ಸಣ್ಣ ಪುಟ್ಟ ತಪ್ಪುಗಳು ಇರುತ್ತೆ. ಅದನ್ನು ಕ್ಷಮಿಸುವಂಥಾ ದೊಡ್ಡ ಗುಣ ನಮ್ಮ ಕನ್ನಡಿಗರಲ್ಲಿ ಇದೆ’ ಎಂದೂ ಉಪೇಂದ್ರ ಹೇಳಿದರು. ಪ್ರಿಯಾಂಕಾ ಉಪೇಂದ್ರ, ‘ನಮ್ಮ ದೇಶದಲ್ಲಿ 16 ನಿಮಿಷಕ್ಕೊಂದು ಅತ್ಯಾಚಾರ ಸಂಭವಿಸುತ್ತಿದೆ. ಕಳೆದ ವರ್ಷ 2000 ರೇಪ್ ಕೇಸ್‌ಗಳಾಗಿದ್ದವು. ನಮ್ಮ ಸಿನಿಮಾದಲ್ಲಿ ಈ ಬಗ್ಗೆ ಜಾಗೃತಿ, ಸಂದೇಶ ಇದೆ. ಹೆಣ್ಣುಮಕ್ಕಳಲ್ಲಿ ಹೇಗೆ ಮನಸ್ಸು, ದೇಹ, ಆತ್ಮದ ಬಗ್ಗೆ ಅರಿವು ಮೂಡಿಸಬೇಕು ಎಂಬ ಅಂಶಗಳಿವೆ’ ಎಂದರು. ನಿರ್ದೇಶಕ ಗುರುಮೂರ್ತಿ, ‘ಸಿನಿಮಾದಲ್ಲಿ ಹೆಣ್ಣಿನ ಘನತೆ ಎತ್ತಿ ಹಿಡಿಯುವ ಪ್ರಯತ್ನವಾಗಿದೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು’ ಎಂಬುದನ್ನು ತೋರಿಸಿದ್ದೇವೆ’ ಎಂದರು. ಎಸ್ ಜಿ ಸತೀಶ್ ನಿರ್ಮಾಪಕರು. ರೋಬೋ ಗಣೇಶ್, ಅಂಕಿತಾ, ದರ್ಶನ್ ಸೂರ್ಯ, ಲಕ್ಷ್ಯಾ ಶೆಟ್ಟಿ, ಪ್ರವೀಣ್ ಸೂರ್ಯ ನಟಿಸಿದ್ದಾರೆ.