ಇಲ್ಲಿನ ಗ್ರಾಪಂ ನೆಲೆಯಲ್ಲಿ ನಡೆಯುತ್ತಿದ್ದ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಹಸಿ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಸ್ಥಗಿತಗೊಂಡು ಎಲ್ಲೆಡೆ ದುರ್ನಾತ ಪಸರಿಸುವಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಉಪ್ಪಿನಂಗಡಿ: ಇಲ್ಲಿನ ಗ್ರಾಪಂ ನೆಲೆಯಲ್ಲಿ ನಡೆಯುತ್ತಿದ್ದ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಹಸಿ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಸ್ಥಗಿತಗೊಂಡು ಎಲ್ಲೆಡೆ ದುರ್ನಾತ ಪಸರಿಸುವಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪಂಚಾಯಿತಿ ವತಿಯಿಂದ ನಿರ್ವಹಿಸಲ್ಪಡುವ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ನಾಗರಿಕರು ಮಾಸಿಕ ನಿಗದಿತ ಶುಲ್ಕವನ್ನು ಪಾವತಿಸುತ್ತರಾದರೂ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. ಪಂಚಾಯಿತಿ ಸೂಚನೆಯಂತೆ ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಿಸಿ ಮನೆ, ಹೊಟೇಲು, ಅಂಗಡಿ ಮುಂಗಟ್ಟುಗಳಲ್ಲಿ ಇಡಲಾಗುತ್ತಿತ್ತು. ಅದನ್ನು ತ್ಯಾಜ್ಯ ವಿಲೇವಾರಿ ಕಾರ್ಯಕರ್ತರು ಪ್ರತ್ಯೇಕವಾಗಿಯೇ ಸಂಗ್ರಹಿಸಿ ಕೊಂಡೊಯ್ಯುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ತ್ಯಾಜ್ಯ ವಿಲೇವಾರಿ ಕಾರ್ಯಕರ್ತರು ಒಣ ಕಸವನ್ನು ಮಾತ್ರ ಕೊಂಡೊಯ್ಯುತ್ತಿದ್ದು, ಹಸಿ ಕಸಕ್ಕೆ ಬೇರೊಂದು ವಾಹನ ಬರಲಿದೆ ಎಂದು ಹೇಳಿ ಮುಂದುವರಿಯುತ್ತಿದ್ದರು. ಆದರೆ ಹಸಿ ಕಸವನ್ನು ಕೊಂಡೊಯ್ಯಲು ಬೇರಾರೂ ಬಾರದೆ ಪರಿಸರದಲ್ಲಿ ದುರ್ನಾತ ಪಸಹರಿಸಲು ಕಾರಣವಾಗಿದೆ. ಜನಪ್ರತಿನಿಧಿಗಳಿಲ್ಲ:

ಪ್ರಸಕ್ತ ಪಂಚಾಯಿತಿ ಚುನಾಯಿತ ಆಡಳಿತ ವ್ಯವಸ್ಥೆಯ ಅವಧಿ ಮುಗಿದ ಬಳಿಕ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿಗಳ ಆಡಳಿತವಿದ್ದು, ತ್ಯಾಜ್ಯದ ಗಂಭೀರ ಸಮಸ್ಯೆ ಬಗ್ಗೆ ಜನರ ನೋವನ್ನು ಆಲಿಸಲು ಸ್ಥಳೀಯ ಜನಪ್ರತಿನಿಧಿಗಳಿಲ್ಲದ ಕೊರಗು ನಾಗರಿಕರನ್ನು ಕಾಡುತ್ತಿದೆ. ಅಧಿಕಾರಿಗಳು ಕಚೇರಿಯಲ್ಲಿ ಸಿಗುತ್ತಿಲ್ಲ. ಸಿಬ್ಬಂದಿಗಳು ಮೌನ ವಹಿಸುತ್ತಿದ್ದು, ಸಮಸ್ಯೆಗೆ ಉತ್ತರ ದೊರಕದಂತಾಗಿದೆ.ಪರ್ಯಾಯ ವ್ಯವಸ್ಥೆ ವಿಳಂಬ:

ತ್ಯಾಜ್ಯ ವಿಲೇವಾರಿಯ ಹೊಣೆಯನ್ನು ಸ್ಥಳೀಯ ಸಂಜೀವಿನಿ ಮಹಿಳಾ ತಂಡಕ್ಕೆ ಒಪ್ಪಿಸಲು ಸರಕಾರದ ನಿರ್ದೇಶನವಿದ್ದು, ಅದರನ್ವಯ ಈ ಹಿಂದಿನ ಟೆಂಡರ್ ಪ್ರಕ್ರಿಯೆ ಕೈಬಿಟ್ಟು ಸಂಜೀವಿನಿ ತಂಡಕ್ಕೆ ಒಪ್ಪಿಸಲಾಗಿದೆ. ಆದರೆ ಈ ಕಾರ್ಯವನ್ನು ನಿರ್ವಹಿಸಲು ಸಂಜೀವಿನಿ ತಂಡ ಹಿಂದೇಟು ಹಾಕಿದ್ದು, ಪರ್ಯಾಯ ವ್ಯವಸ್ಥೆಗೆ ಸಮಯಾವಕಾಶ ಬೇಕಾಗಿದೆ. ಹಸಿ ಕಸ ಸಂಗ್ರಹಿಸದಿರುವುದರಿಂದ ಸಮಸ್ಯೆ ಉದ್ಬವಿಸಿದೆ. ಟೆಂಡರ್ ಕರೆಯುವ ಮತ್ತು ಹೊಸದಾಗಿ ಜಾಗ ಗುರುತಿಸುವ ಕಾರ್ಯ ಚಾಲನೆಯಲ್ಲಿದೆ ಎಂದು ಉಪ್ಪಿನಂಗಡಿ ಗ್ರಾಪಂ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಪ್ರತಿಕ್ರಿಯಿಸಿದ್ದಾರೆ. ವಾರದಿಂದ ಹಸಿ ಕಸ ಮನೆಯಂಗಳದಲ್ಲೇ ಇದೆ. ಮನೆ ಬಾಗಿಲಿಗೆ ಕಸದ ವಾಹನ ಬಂದರೂ ಅವರು ಒಣ ಕಸವನ್ನು ಮಾತ್ರ ಕೊಂಡೊಯ್ಯುತ್ತಿದ್ದಾರೆ. ಹಸಿ ಕಸ ಕೊಳೆತು ಹುಳುಗಳಾಗುತ್ತಿದೆ. ಹಸಿ ಕಸವನ್ನು ಕೊಂಡೊಯ್ಯದಿದ್ದರೆ ಕಸವನ್ನು ಗ್ರಾಪಂ ಕಚೇರಿ ಎದುರು ಹಾಕಿ ಬರುತ್ತೇನೆ ಎಂದು ಗೃಹಿಣಿಯೊಬ್ಬರು ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.