ಸಾರಾಂಶ
ಚಿತ್ರ: ಲವ್‌ಲೀ
ನಿರ್ದೇಶನ: ಚೇತನ್ ಕೇಶವ್
ತಾರಾಗಣ: ವಶಿಷ್ಠ ಸಿಂಹ, ಸ್ಟೆಫಿ ಪಟೇಲ್, ಬೇಬಿ ವಂಶಿಕಾ, ಮಾಳವಿಕಾ, ದತ್ತಣ್ಣ
ರೇಟಿಂಗ್: 3
ಪ್ರಿಯಾ ಕೆರ್ವಾಶೆ
ಹಿಸ್ಟರಿ ಅನ್ನೋದು ನಮ್ಮ ಲೈಫಲ್ಲಿ ಭಲೇ ಆಟ ಆಡುತ್ತೆ. ನಾವು ನಮ್ಮ ಹಿಸ್ಟರಿಯನ್ನು ಯಾವ ಹಿನ್ನೆಲೆಯಲ್ಲಿ ಸ್ವೀಕರಿಸಿದ್ದೇವೆ ಎಂಬುದರ ಮೇಲೆ ವರ್ತಮಾನದಲ್ಲಿ ನಾವು ಹೀರೋನಾ ವಿಲನ್ನಾ ಅನ್ನೋದು ನಿರ್ಧಾರ ಆಗುತ್ತದೆ. ಇಂಥದ್ದೊಂದು ಬೇಸ್‌ಲೈನ್‌ನಲ್ಲಿ ಒಲವಿನ ಗಾಲಿಯ ಮೇಲೆ ಚಲಿಸುವ ಸಿನಿಮಾ ‘ಲವ್‌ಲೀ’.ಜೈ ಒಬ್ಬ ಗ್ಯಾಂಗ್‌ಸ್ಟರ್, ಅನಾಥ. ಕೆಟ್ಟವರ ದೋಸ್ತಿ, ಬೆಳೆದ ಪರಿಸರ ಆತನನ್ನು ಕ್ರೂರಿಯನ್ನಾಗಿ ಮಾಡುತ್ತದೆ. ಅಂಥಾ ಮೃಗೀಯ ವ್ಯಕ್ತಿತ್ವದಲ್ಲೂ ಅಂತಃಕರಣದ ಸೆಲೆ ಕಾಣುವವಳು ಜನನಿ. ಮಹಾ ಒರಟನೊಬ್ಬನ ಬದುಕಲ್ಲಿ ಒಲುಮೆ ಚಿಲುಮೆಯಂಥಾ ಹುಡುಗಿ ಬಂದರೆ ಬದುಕು ಹೇಗಾಗಬಹುದು?
ಹುಡುಗಿ ಬರುವ ಮೊದಲಿನ ಜೈ ಬದುಕು, ಅವಳು ಬಂದಮೇಲೆ ಬದಲಾಗುವ ಜೈ ಬದುಕು ಇದೇ ಕಥೆಯ ಹರಿವು. ರಕ್ತರಂಜಿತ ರಗಡ್ ಪಾತ್ರದಲ್ಲೂ ಇದಕ್ಕೆ ಕಂಪ್ಲೀಟ್ ಕಾಂಟ್ರಾಸ್ಟ್ ಆದ ಒಲವೇ ಮೂರ್ತಿವೆತ್ತಂಥಾ ಪಾತ್ರದಲ್ಲೂ ಲೀಲಾಜಾಲವಾಗಿ ಅಭಿನಯಿಸಿದ್ದಾರೆ ವಶಿಷ್ಠ ಸಿಂಹ. ಸ್ಟೆಫಿ ಅವರ ನಟನೆ, ಮ್ಯಾನರಿಸಂಗಳು ಚೆನ್ನಾಗಿವೆ.
ಸಮುದ್ರದ ಹಿನ್ನೆಲೆಯ ಮನೆ, ಹಾಡಿನಲ್ಲಿ ತೆರೆದುಕೊಳ್ಳುವ ಕಲರ್‌ಫುಲ್ ಜಗತ್ತು, ಕರಾವಳಿ ಪರಿಸರವನ್ನು ಛಾಯಾಗ್ರಾಹಕ ಅಶ್ವಿನ್ ಕೆನಡಿ ಉತ್ತಮವಾಗಿ ತೆರೆ ಮೇಲೆ ತೋರಿಸಿದ್ದಾರೆ. ಆದರೆ ಕಡ್ಲೆ ನಡುವೆ ಕಲ್ಲು ಸಿಕ್ಕಂತಾಗುವುದು ದತ್ತಣ್ಣ ಸೇರಿದಂತೆ ಇತರ ಪಾತ್ರಧಾರಿಗಳು ಮಾಡುವ ಮಂಗಳೂರು ಕನ್ನಡದ ಆಭಾಸದ ಅನುಕರಣೆ.
ಉಳಿದಂತೆ ಕಥೆಯನ್ನು ಇನ್ನಷ್ಟು ಆಳವಾಗಿ, ಹೊಸತನ ಬೆರೆಸಿ ನಿರೂಪಿಸಿದ್ದರೆ ಈ ಸಿನಿಮಾ ನಾರ್ಮಲ್ ಫ್ರೇಮ್ ವರ್ಕಿನ ಆಚೆ ನಿಲ್ಲುವ ಸಾಧ್ಯತೆ ಇತ್ತು.