ಸಾರಾಂಶ
ಸಿನಿವಾರ್ತೆ
ಯಶ್ ಪಾಲುದಾರಿಕೆಯಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಸಿನಿಮಾ ಮೂರು ಭಾಗಗಳಲ್ಲಿ ಬರಲಿದ್ದು, ಈ ಚಿತ್ರದ ಮೊದಲ ಭಾಗದ ಬಜೆಟ್ ರೂ.835 ಕೋಟಿ ಎಂಬ ಸುದ್ದಿ ಬಾಲಿವುಡ್ ಕಡೆಯಿಂದ ಬಂದಿದೆ. ಇಷ್ಟು ದೊಡ್ಡ ಮೊತ್ತದ ಬಜೆಟ್‌ನಲ್ಲಿ ಯಶ್ ಪಾಲು ರೂ.400 ಕೋಟಿ ಎನ್ನಲಾಗಿದೆ.
ಯಶ್ ಅವರು ರಾವಣ ಪಾತ್ರದಲ್ಲಿ ನಟಿಸುವುದರ ಜತೆಗೆ ನಮಿತ್ ಮಲ್ಹೋತ್ರಾ ಜೊತೆ ಸೇರಿ ನಿರ್ಮಿಸುತ್ತಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಾಗಿಯೇ 600 ದಿನ ಮೀಸಲಿಡಲಾಗಿದೆ ಎಂಬುದು ಮತ್ತೊಂದು ಮಾಹಿತಿ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಈ ಸಿನಿಮಾ ತಯಾರಾಗಲಿದೆ ಎನ್ನುತ್ತವೆ ಮೂಲಗಳು. ಇದನ್ನು ವರ್ಲ್ಡ್ ಸಿನಿಮಾ ಮಟ್ಟದಲ್ಲಿ ರೂಪಿಸಲಾಗುತ್ತಿದೆ, ಇಡೀ ವಿಶ್ವಕ್ಕೆ ರಾಮಾಯಣವನ್ನು ತೋರಿಸುವ ಪ್ರಯತ್ನ ಇದಾಗಲಿದೆ ಎನ್ನಲಾಗಿದೆ.
ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದು, ಇವರ ಪಾತ್ರಗಳ ಶೂಟಿಂಗ್ ಈಗಾಗಲೇ ಶುರುವಾಗಿದೆ. ರಣಬೀರ್ ಕಪೂರ್ ಪಾತ್ರಕ್ಕಾಗಿ ಬಿಲ್ವಿದ್ಯೆಯನ್ನೂ ಕಲಿಯುತ್ತಿದ್ದಾರೆ.
ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ, ಹನುಮಂತನಾಗಿ ಸನ್ನಿ ಡಿಯೋಲ್, ವಿಭೀಷಣ ಆಗಿ ವಿಜಯ್ ಸೇತುಪತಿ, ಶೂರ್ಪನಖಿ ಪಾತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳಲಿದ್ದು, ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.