ಸಾರಾಂಶ
ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ‘ನನ್ನನ್ನು ಹಗುರವಾಗಿ ಪರಿಗಣಿಸಬೇಡಿ’ ಎಂದು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಶಿಂಧೆ ನಡುವೆ ಬಿರುಕು ಮೂಡಿದೆ ಎಂಬ ವರದಿಗಳ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
ತಮಗೆ ಬಾಂಬ್ ಬೆದರಿಕೆ ಕರೆ ಬಂದಿದ್ದಕ್ಕೆ ಸುದ್ದಿಗಾರರಿಗೆ ಶುಕ್ರವಾರ ಮೊದಲು ಪ್ರತಿಕ್ರಿಯಿಸಿದ ಅವರು, ‘ಬೆದರಿಕೆ ಬರುತ್ತಲೇ ಇರುತ್ತವೆ. ಇದಕ್ಕೆ ನಾನು ಹೆದರಲ್ಲ’ ಎಂದರು.
ಇದರ ಬೆನ್ನಲ್ಲೇ ರಾಜಕೀಯ ಹೇಳಿಕೆ ನೀಡಿದ ಅವರು, ‘ಯಾವತ್ತೂ ನನ್ನನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ನನ್ನನ್ನು ಹಗುರವಾಗಿ ಪರಿಗಣಿಸಿದವರಿಗೆ ನಾನು ಈಗಾಗಲೇ ಈ ಮಾತನ್ನು ಹೇಳಿದ್ದೇನೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಆದರೆ ನಾನು ಬಾಳಾಸಾಹೇಬ್ ಠಾಕ್ರೆ (ಶಿವಸೇನೆಯ ಸ್ಥಾಪಕ) ಅವರ ಕಾರ್ಯಕರ್ತನೂ ಹೌದು. ಈ ಎಚ್ಚರಿಕೆ ಇಲ್ಲರಿಗೂ ಇರಲಿ’ ಎಂದರು.
ಮಹಾ ಡಿಸಿಎಂ ಶಿಂಧೆಗೆ ಬಾಂಬ್ ಬೆದರಿಕೆ: ಇಬ್ಬರು ಯುವಕರ ಬಂಧನ
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಾರಿಗೆ ಬಾಂಬ್ ಇರಿಸಿ ಸ್ಫೋಟ ನಡೆಸುವುದಾಗಿ ಗುರುವಾರ ಬಂದ ಬೆದರಿಕೆ ಕರೆಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಯುವಕರನ್ನು ಬಂಧಿಸಿದ್ದಾರೆ.ಬೆದರಿಕೆ ಪ್ರಕರಣ ಬೆನ್ನತ್ತಿದ ಗೋರೇಗಾಂವ್ ಪೊಲೀಸರು, ಬುಲ್ಢಾನಾ ಜಿಲ್ಲೆಯ ದೇವಲಗಾಂವ್ ಎಂಬಲ್ಲಿ ಅಭಯ್ ಶಿಂಘ್ನೆ (22) ಮತ್ತು ಮಂಗೇಶ್ ವಾಯಲ್ (35) ರನ್ನು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ. ಜೊತೆಗೆ ಇವರಿಂದ ಮೊಬೈಲ್ ಸೇರಿದಂತೆ ವಿದ್ಯುತ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 351(3) ಮತ್ತು 353(2) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ, ಬಿಜೆಪಿ ಸರ್ಕಾರ ರಚಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿದ ಅವರು, ‘2022ರಲ್ಲಿ ನಾನು ಸರ್ಕಾರವನ್ನೇ ಬದಲಾಯಿಸಿದ್ದೇನೆ. ವಿಧಾನಸಭೆಯಲ್ಲಿ ನನ್ನ ಮೊದಲ ಭಾಷಣದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದ್ದೆ. ಆದರೆ 232 ಸ್ಥಾನಗಳು ಸಿಕ್ಕಿವೆ. ಅದಕ್ಕಾಗಿಯೇ, ನನ್ನನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಹೇಳುತ್ತಿದ್ದೇನೆ’ ಎಂದರು.
2022ರಲ್ಲಿ ಶಿಂಧೆ ಶಿವಸೇನೆಯಿಂದ ಬಂಡಾಯವೆದ್ದು, ಕಾಂಗ್ರೆಸ್, ಎನ್‌ಸಿಪಿ ಬೆಂಬಲಿತ ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ್ದರು.