ಕಾಂಬೋಡಿಯಾ ಅರಣ್ಯಕ್ಕೆ ಕರ್ನಾಟಕದ ಹುಲಿಗಳು

| N/A | Published : Aug 05 2025, 12:30 AM IST / Updated: Aug 05 2025, 04:32 AM IST

ಸಾರಾಂಶ

 ಭಾರತದಲ್ಲಿ ಚೀತಾ ಸಂತತಿಗಳ ಪುನರುಜ್ಜೀವನಕ್ಕಾಗಿ ನಮೀಬಿಯಾ ಸೇರಿ ಆಫ್ರಿಕಾ ದೇಶಗಳಿಂದ ಚೀತಾಗಳನ್ನು ತಂದ ಬೆನ್ನಲ್ಲೇ, ತನ್ನ ದೇಶದ ಹುಲಿಗಳನ್ನು ಕಾಂಬೋಡಿಯಾಗೆ ಕಳುಹಿಸಲು ಭಾರತ ಸರ್ಕಾರ ಮುಂದಾಗಿದೆ.

 ಭೋಪಾಲ್: ಭಾರತದಲ್ಲಿ ಚೀತಾ ಸಂತತಿಗಳ ಪುನರುಜ್ಜೀವನಕ್ಕಾಗಿ ನಮೀಬಿಯಾ ಸೇರಿ ಆಫ್ರಿಕಾ ದೇಶಗಳಿಂದ ಚೀತಾಗಳನ್ನು ತಂದ ಬೆನ್ನಲ್ಲೇ, ತನ್ನ ದೇಶದ ಹುಲಿಗಳನ್ನು ಕಾಂಬೋಡಿಯಾಗೆ ಕಳುಹಿಸಲು ಭಾರತ ಸರ್ಕಾರ ಮುಂದಾಗಿದೆ. ಇದಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಹುಲಿಗಳನ್ನು ಕಳುಹಿಸಲು ಸರ್ಕಾರ ನಿರ್ಧರಿಸಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ದಶಕದ ಬಳಿಕ ಕಾಂಬೋಡಿಯಾ ಹುಲಿ ಸಂತತಿಗೆ ಸಾಕ್ಷಿಯಾಗಲಿದೆ.

ಅಂತಾರಾಷ್ಟ್ರೀಯ ವನ್ಯಜೀವಿ ವಲಯದಲ್ಲಿ ಭಾರತ ದಿಟ್ಟ ಹೆಜ್ಜೆಯನ್ನಿಡಲು ಮುಂದಾಗಿದ್ದು, ಇದೇ ಮೊದಲ ಬಾರಿಗೆ ವಿದೇಶಕ್ಕೆ ಹುಲಿಗಳನ್ನು ಸ್ಥಳಾಂತರಿಸಲು ಮುಂದಾಗಿದೆ. 2016ರಲ್ಲಿ ಕಾಂಬೋಡಿಯಾದಲ್ಲಿ ಹುಲಿ ಸಂತತಿ ನಿರ್ನಾಮವಾಗಿತ್ತು. ಅದಾಗಿ 9 ವರ್ಷಗಳ ಬಳಿಕ ಭಾರತದ ಹುಲಿಗಳನ್ನು ಕಾಂಬೋಡಿಯಾಗೆ ಕಳುಹಿಸಲಿದೆ. ಎರಡು ದೇಶಗಳ ನಡುವೆ ಇದಕ್ಕೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟ್ಟಿದೆ. ಈ ಪ್ರಕಾರ 6 ಹುಲಿಗಳನ್ನು ಕಾಂಬೋಡಿಯಾಗೆ ಕಳುಹಿಸಲಾಗುತ್ತಿದೆ.

ಇನ್ನು ಈ ಪೈಕಿ ದೇಶದಲ್ಲಿ ಅತಿಹೆಚ್ಚು ಹುಲಿ ಸಂತತಿ ಹೊಂದಿರುವ ಮಹಾರಾಷ್ಟ್ರದಿಂದ ಹೆಚ್ಚಿನ ಹುಲಿಗಳನ್ನು ಕಳುಹಿಸಿ ಕೊಡುವ ಸಾಧ್ಯತೆಯಿದೆ. ಜೊತೆಗೆ ಕರ್ನಾಟಕ ಮೀಸಲು ಅರಣ್ಯ, ಕನ್ಹಾ, ಬಾಂಧವಗಢ ಮತ್ತು ಪೆಂಚ್‌ ಮೀಸಲು ಅರಣ್ಯದಿಂದ ಕಳುಹಿಸಲು ಸಾಧ್ಯತೆಯಿದೆ.

ಭಾರತ ಈ ಹಿಂದೆ 2009ರಲ್ಲಿ ಮಧ್ಯಪ್ರದೇಶದ ಪನ್ನಾ ಮೀಸಲು ಅರಣ್ಯದಿಂದ ಹುಲಿ ಸ್ಥಳಾಂತರವನ್ನು ಯಶಸ್ವಿಯಾಗಿ ಮಾಡಿತ್ತು. ಆದರೆ ವಿದೇಶಕ್ಕೆ ಕಳುಹಿಸಿ ಕೊಡುತ್ತಿರುವುದು ಇದೇ ಮೊದಲು. 2024ರಲ್ಲಿಯೇ ಭಾರತದ ಹುಲಿಗಳನ್ನು ಕಾಂಬೋಡಿಯಾಗೆ ಕಳುಹಿಸಿ ಕೊಡುವ ಬಗ್ಗೆ ಮಾತುಕತೆಯಾಗಿತ್ತು. ಆದರೆ ಸ್ಥಳಾಂತರದ ಪ್ರಕ್ರಿಯೆಯಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ ಕಾರಣಕ್ಕೆ ವಿಳಂಬ ಮಾಡಿತ್ತು. ಸದ್ಯ ವನ್ಯಜೀವಿ ವಿಜ್ಞಾನಿಗಳು ಭಾರತ ಮತ್ತು ಕಾಂಬೋಡಿಯಾದ ಅರಣ್ಯ ಪರಿಸ್ಥಿತಿ ಅಧ್ಯಯನ ಮಾಡುತ್ತಿದ್ದು, ಆ ಬಳಿಕ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ. ನವೆಂಬರ್‌ , ಡಿಸೆಂಬರ್‌ ವೇಳೆಗೆ ಸ್ಥಳಾಂತರ ಸಾಧ್ಯತೆಯಿದೆ.

Read more Articles on