ಸೇನೆಯ ನೈತಿಕತೆ ಕುಗ್ಗಿಸಬೇಡಿ, ಉಗ್ರರ ವಿರುದ್ಧ ಒಂದಾಗಿ ನಿಲ್ಲಿ : ಸುಪ್ರೀಂ

| N/A | Published : May 02 2025, 12:08 AM IST / Updated: May 02 2025, 04:33 AM IST

The Supreme Court of India (File Photo/ANI)
ಸೇನೆಯ ನೈತಿಕತೆ ಕುಗ್ಗಿಸಬೇಡಿ, ಉಗ್ರರ ವಿರುದ್ಧ ಒಂದಾಗಿ ನಿಲ್ಲಿ : ಸುಪ್ರೀಂ
Share this Article
  • FB
  • TW
  • Linkdin
  • Email

ಸಾರಾಂಶ

  ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ದೇಶ ಸಜ್ಜಾಗುತ್ತಿರುವ ಹೊತ್ತಿನಲ್ಲಿ, ದಾಳಿಯ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ‘ಬೇಜವಾಬ್ದಾರಿಯುತ’ ಎಂದು ಕರೆದು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. 

ನವದೆಹಲಿ: ಪಹಲ್ಗಾಂ ಉಗ್ರದಾಳಿಗೆ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ದೇಶ ಸಜ್ಜಾಗುತ್ತಿರುವ ಹೊತ್ತಿನಲ್ಲಿ, ದಾಳಿಯ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ‘ಬೇಜವಾಬ್ದಾರಿಯುತ’ ಎಂದು ಕರೆದು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅಂತೆಯೇ, ಸೇನೆಯ ನೈತಿಕತೆಯನ್ನು ಕುಗ್ಗಿಸಬೇಡಿ ಎಂದು ಎಚ್ಚರಿಸಿದೆ.

‘ಉಗ್ರದಾಳಿಯ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ರಚಿಸಬೇಕು’ ಎಂದು ಕೋರಿ ಕಾಶ್ಮೀರದ ಜುನೈದ್‌ ಮೊಹಮ್ಮದ್‌ ಹಾಗೂ ಇಬ್ಬರು ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

ಇದರಿಂದ ಕಂಡು ಕೆಂಡವಾಗಿರುವ ನ್ಯಾ। ಸೂರ್ಯಕಾಂತ್‌ ಮತ್ತು ಎನ್‌.ಕೆ. ಸಿಂಗ್‌ ಅವರ ಪೀಠ, ‘ಜವಾಬ್ದಾರಿಯುತರಾಗಿ ವರ್ತಿಸಿ. ದೇಶದ ಪ್ರತಿ ನಿಮ್ಮದೇ ಆದ ಕೆಲ ಕರ್ತವ್ಯಗಳಿವೆ. ನಾವು ಎಂದಿನಿಂದ ತನಿಖೆಯಲ್ಲಿ ಪ್ರವೀಣತೆ ಪಡೆದೆವು? ನಿವೃತ್ತ ನ್ಯಾಯಾಧೀಶರು ತೀರ್ಪು ನೀಡಬಹುದೇ ಹೊರತು ನಾವು ತನಿಖೆ ಮಾಡಲು ಸಾಧ್ಯವಿಲ್ಲ. ಜಡ್ಜ್‌ಗಳು ಉಗ್ರದಾಳಿಗಳ ತನಿಖೆ ನಡೆಸುವಲ್ಲಿ ಪರಿಣಿತರಲ್ಲ’ ಎಂದು ಚಾಟಿ ಬೀಸಿದೆ. 

ಅಂತೆಯೇ, ‘ಇದು ದೇಶವಾಸಿಗಳು ಉಗ್ರರ ವಿರುದ್ಧ ಕೈಜೋಡಿಸಬೇಕಾಗಿರುವ ಸಮಯ. ಪ್ರಕರಣದ ಸೂಕ್ಷ್ಮತೆಯನ್ನು ಅರಿಯಿರಿ’ ಎಂದು ಬುದ್ಧಿವಾದ ಹೇಳಿದೆ. ಅರ್ಜಿಯಲ್ಲಿ, ‘ಸಂಘರ್ಷ ಪೀಡಿತ ಪ್ರದೇಶಗಳಲ್ಲಿನ ಪ್ರವಾಸಿ ತಾಣಗಳಿಗೆ ಕನಿಷ್ಠ ಭದ್ರತಾ ಮಾನದಂಡಗಳನ್ನು ರಚಿಸಬೇಕು. ಕೇಂದ್ರ, ಜಮ್ಮು ಕಾಶ್ಮೀರ ಸರ್ಕಾರ, ಸಿಆರ್‌ಪಿಎಫ್‌, ಎನ್‌ಐಎಗೆ ಪ್ರವಾಸಿಗರ ಭದ್ರತೆಗೆ ಯೋಜನೆ ರೂಪಿಸಲು ಸೂಚಿಸಬೇಕು’ ಎಂದೂ ಆಗ್ರಹಿಸಲಾಗಿತ್ತು.