ಕೊಯಮತ್ತೂರು: ಅಣ್ಣಾಮಲೈ ಕಮಾಲ್‌ ಮಾಡುವರೇ?

| Published : Mar 30 2024, 12:47 AM IST / Updated: Mar 30 2024, 12:52 PM IST

Annamalai

ಸಾರಾಂಶ

ದಕ್ಷಿಣ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಈ ಬಾರಿ ತಮಿಳುನಾಡಿನಲ್ಲಿ ತನ್ನ ಸಾಂಪ್ರದಾಯಿಕ ಮಿತ್ರ ಎಐಎಡಿಎಂಕೆಯಿಂದ ದೂರವಾಗಿದೆ.

ದಕ್ಷಿಣ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಈ ಬಾರಿ ತಮಿಳುನಾಡಿನಲ್ಲಿ ತನ್ನ ಸಾಂಪ್ರದಾಯಿಕ ಮಿತ್ರ ಎಐಎಡಿಎಂಕೆಯಿಂದ ದೂರವಾಗಿದೆ. 

ಅದರ ಬದಲಾಗಿ ಟಿಟಿವಿ ದಿನಕರನ್‌ರ ಎಎಂಎಂಕೆ. ಜಿ.ಕೆ.ವಾಸನ್‌ರ ತಮಿಳು ಮನಿಲಾ ಕಾಂಗ್ರೆಸ್‌, ರಾಮ್‌ದಾಸ್‌ ನೇತೃತ್ವದ ಪಟ್ಟಾಲಿ ಮಕ್ಕಳ್‌ ಕಟ್ಚಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದೆ.

ಅದರಲ್ಲೂ ಸಿಂಘಂ ಎಂದೇ ಖ್ಯಾತಿ ಗಳಿಸಿರುವ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಈ ಬಾರಿ ಬಿಜೆಪಿಯ ಸಾರಥ್ಯ ವಹಿಸಿದ ಬಳಿಕ ಪಕ್ಷದ ಕಾರ್ಯಕರ್ತರಲ್ಲಿ ಗೆಲುವಿನ ಉತ್ಸಾಹ ಹೆಚ್ಚಿದೆ. 

ಸ್ವತಃ ಅಣ್ಣಾಮಲೈ ಕೊಯಮತ್ತೂರಿನಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಅಲ್ಲಿ ಗೆದ್ದು ಬಿಜೆಪಿಗೆ ತಮಿಳುನಾಡಿನಲ್ಲಿ ಖಾತೆ ತೆರೆದುಕೊಡುವ ಹಂಬಲದಲ್ಲಿದ್ದಾರೆ. 

ಅವರಿಗೆ ಆ ಕ್ಷೇತ್ರದಲ್ಲಿ ಎಐಎಡಿಎಂಕೆಯಿಂದ ರಾಮಚಂದ್ರನ್‌ ಹಾಗೂ ಡಿಎಂಕೆಯಿಂದ ರಾಜ್‌ಕುಮಾರ್‌ ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ. 

ವಾತಾವರಣ ಹೇಗಿದೆ?
2019ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಆದರೆ ಈ ಬಾರಿ ಎರಡೂ ಪಕ್ಷಗಳೂ ಪ್ರತ್ಯೇಕವಾಗಿ ಕಣಕ್ಕಿಳಿಯುತ್ತಿರುವುದು ಒಂದಷ್ಟು ಮತಗಳನ್ನು ವಿಭಜಿಸುವ ಸಾಧ್ಯತೆ ಇದೆ. 

ಅಲ್ಲದೆ ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಅಣ್ಣಾಮಲೈ ಹಾಗೂ ಎಐಎಡಿಎಂಕೆಯಿಂದ ಸ್ಪರ್ಧಿಸಿರುವ ರಾಮಚಂದ್ರನ್‌ ಒಂದೇ ಮೂಲದಿಂದ ಬಂದವರಾಗಿದ್ದು, ಕೊಯಮತ್ತೂರಿನ ಪಿಎಸ್‌ಜಿ ಕಾಲೇಜಿನಲ್ಲಿ ಎಮಜಿನಿಯರಿಂಗ್‌ ಪದವಿ ಮುಗಿಸಿ ಐಐಎಂನಲ್ಲಿ ಪದವೀಧರರಾಗಿದ್ದಾರೆ.

 ಪ್ರಸ್ತುತ ಎಐಎಡಿಎಂಕೆ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರೂ ಆಗಿರುವ ಅವರಿಗೆ ಆರು ಶಾಸಕರ ಬಲವೂ ಇದೆ.

ಬಿಜೆಪಿ ಅಬ್ಬರ: 1998ರಲ್ಲಿ ಅಡ್ವಾಣಿ ಭಾಷಣ ಮಾಡುವ ಕೆಲವೇ ಕ್ಷಣಗಳ ಮೊದಲಿಗೆ ಕ್ಷೇತ್ರದಲ್ಲಿ ಉಂಟಾದ ಸ್ಫೋಟದ ಸ್ಥಳದಲ್ಲಿ ರೋಡ್‌ಶೋ ಅಂತ್ಯಗೊಳಿಸಿ ಸಂತ್ರಸ್ತ ಕುಟುಂಬವನ್ನು ಮಾತನಾಡಿಸುವ ಮೂಲಕ ಬಿಜೆಪಿ ಅಬ್ಬರದ ಪ್ರಚಾರ ಆರಂಭಿಸಿದೆ. 

ಅಲ್ಲದೆ ಅಣ್ಣಾಮಲೈ ಎಲ್ಲ ಕ್ಷೇತ್ರಗಳಲ್ಲಿ ನಡೆಸಿದ ಎನ್‌ ಮನ್‌ ಎನ್‌ ಮಕ್ಕಳ್‌ ಯಾತ್ರೆಯಿಂದ ಜನತೆಗೆ ಹತ್ತಿರವಾಗಿದ್ದಾರೆ. ಜೊತೆಗ ಪ್ರಬಲ ಗೌಂಡರ್‌ ಸಮುದಾಯವರೂ ಆಗಿದ್ದು, ಅವರ ಬಲವನ್ನು ಹೆಚ್ಚಿಸಿದೆ. 

ಇನ್ನುಳಿದಂತೆ ಡಿಎಂಕೆಯಿಂದ ಮಾಜಿ ಮೇಯರ್‌ ಗಣಪತಿ ರಾಜ್‌ಕುಮಾರ್‌ ಸ್ಪರ್ಧಿಸಿದ್ದು, ಸ್ಥಳೀಯ ನಗರ ಪ್ರದೇಶದಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. 

ಜೊತೆಗೆ ಭಾಷಾ ಅಸ್ಮಿತೆಯಿರುವ ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ವಿರುದ್ಧದ ಅಲೆಯಿದ್ದು ಇವರಿಗೆ ವರವಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕೊಯಮತ್ತೂರು ಕ್ಷೇತ್ರದಲ್ಲಿ ಒಟ್ಟು 41 ಅಭ್ಯರ್ಥಿಗಳು ಕಣದಲ್ಲಿದ್ದು, ಏ.19ರಂದು ನಡೆಯುವ ಮತದಾನ ತೀವ್ರ ಕುತೂಹಲ ಕೆರಳಿಸಿದೆ.