ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ನಿಧನದಿಂದ ಅವರ ಹುಟ್ಟೂರಾದ ಪಾಕಿಸ್ತಾನದ ಗಾಹ್‌ನಲ್ಲೂ ಶೋಕ

| Published : Dec 28 2024, 12:45 AM IST / Updated: Dec 28 2024, 04:34 AM IST

ಸಾರಾಂಶ

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ನಿಧನದಿಂದಾಗಿ ಅವರ ಹುಟ್ಟೂರಾದ ಪಾಕಿಸ್ತಾನದ ಗಾಹ್‌ನಲ್ಲೂ ಶೋಕ ಮಡುಗಟ್ಟಿದೆ.

ಗಾಹ್‌(ಪಾಕಿಸ್ತಾನ): ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ನಿಧನದಿಂದಾಗಿ ಅವರ ಹುಟ್ಟೂರಾದ ಪಾಕಿಸ್ತಾನದ ಗಾಹ್‌ನಲ್ಲೂ ಶೋಕ ಮಡುಗಟ್ಟಿದೆ. ಇಸ್ಲಾಮಾಬಾದ್‌ನಿಂದ 100 ಕಿ.ಮೀ. ನೈಋತ್ಯದಲ್ಲಿರುವ ಈ ಗ್ರಾಮದ ಜನರು ಸಭೆ ಸೇರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ಸಿಂಗ್‌ ಓದಿದ ಶಾಲೆಯಲ್ಲೇ ಶಿಕ್ಷಕರಾಗಿರುವ ಅಲ್ತಾಫ್‌ ಹುಸೇನ್‌ ಮಾತನಾಡಿ, ‘ಇಡೀ ಹಳ್ಳಿಯೇ ಶೋಕಿಸುತ್ತಿದೆ. ನಮ್ಮ ಪರಿವಾರದ ಸದಸ್ಯನೇ ಸಾವನ್ನಪ್ಪಿದಂತೆ ಭಾಸವಾಗುತ್ತಿದೆ’ ಎಂದರು. 

ಈ ವೇಳೆ ಮಾತನಾಡಿದ ಸಿಂಗ್‌ರ ಸಹಪಾಠಿಯ ಸೋದರಳಿಯ ರಾಜಾ ಆಶಿಕ್‌ ಅಲಿ, ‘ಭಾರತದಲ್ಲಿ ನಡೆಯುತ್ತಿರುವ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವ ಬಯಕೆಯಿತ್ತು. ಆದರೆ ಅದು ಸಾಧ್ಯವಿಲ್ಲದ ಕಾರಣ ಇಲ್ಲೇ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ. ಸಿಂಗ್‌ ಪ್ರಧಾನಿಯಾದಾಗ ನಮ್ಮ ಹಳ್ಳಿಯ ಹುಡುಗ ಆ ಮಟ್ಟಕ್ಕೇರಿದ ಬಗ್ಗೆ ಇಡೀ ಹಳ್ಳಿಯೇ ಹೆಮ್ಮೆಪಟ್ಟಿತ್ತು’ ಎಂದರು.

ಅಂತೆಯೇ, ‘ಮೋಹನ ಎಂದೂ ಗಾಹ್‌ಗೆ ಬರಲಿಲ್ಲ. ಆದರೆ ಅವರ ಸಾವಿನ ಸುದ್ದಿ ಬಂತು. ಇನ್ನುಮೇಲಾದರೂ ಅವರ ಪರಿವಾರದ ಯಾರಾದರು ಇಲ್ಲಿಗೆ ಬರಲಿ ಎಂದು ಬಯಸುತ್ತೇವೆ’ ಎಂದು ಗ್ರಾಮಸ್ಥರು   ತಮಗಿರುವ ಪ್ರೀತಿ ಹಾಗೂ ಹೆಮ್ಮೆಯನ್ನು ವ್ಯಕ್ತಪಡಿಸಿದರು.