2.5 ವರ್ಷದಲ್ಲೇ ರಾಜ್ಯದ2422 ರೈತರು ಆತ್ಮಹತ್ಯೆ- ಈ ಪೈಕಿ 2067 ರೈತ ಕುಟುಂಬಕ್ಕೆ ಪರಿಹಾರ- 10 ವರ್ಷದಲ್ಲಿ 10371 ರೈತರು ಸಾವಿಗೆ ಶರಣು- ಕಂದಾಯ ಇಲಾಖೆ ಅಂಕಿ-ಅಂಶದಿಂದ ಬಹಿರಂಗ

| Published : Sep 06 2025, 01:00 AM IST

2.5 ವರ್ಷದಲ್ಲೇ ರಾಜ್ಯದ2422 ರೈತರು ಆತ್ಮಹತ್ಯೆ- ಈ ಪೈಕಿ 2067 ರೈತ ಕುಟುಂಬಕ್ಕೆ ಪರಿಹಾರ- 10 ವರ್ಷದಲ್ಲಿ 10371 ರೈತರು ಸಾವಿಗೆ ಶರಣು- ಕಂದಾಯ ಇಲಾಖೆ ಅಂಕಿ-ಅಂಶದಿಂದ ಬಹಿರಂಗ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ 10 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕಳೆದ ಎರಡೂವರೆ ವರ್ಷದಲ್ಲೇ 2,422 ರೈತರು ಸಾವಿಗೆ ಶರಣಾಗಿದ್ದಾರೆ!

- ಕಳೆದ 2.5 ವರ್ಷಗಳಲ್ಲಿ ಹಾವೇರಿಯಲ್ಲಿ ಅತಿ ಹೆಚ್ಚು ಅಂದರೆ 260 ರೈತರು ಸಾವಿಗೆ ಶರಣು- 218 ಆತ್ಮಹತ್ಯೆಯೊಂದಿಗೆ ಬೆಳಗಾವಿ ಜಿಲ್ಲೆಗೆ 2ನೇ ಸ್ಥಾನ. ಕೋಲಾರದಲ್ಲಿ ಒಬ್ಬ ರೈತ ಸಾವು- ರಾಜ್ಯದ ಉಳಿದ ಭಾಗಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲೇ ರೈತರ ಆತ್ಮಹತ್ಯೆ ಹೆಚ್ಚು

--ಗಿರೀಶ್‌ ಗರಗ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ 10 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕಳೆದ ಎರಡೂವರೆ ವರ್ಷದಲ್ಲೇ 2,422 ರೈತರು ಸಾವಿಗೆ ಶರಣಾಗಿದ್ದಾರೆ!

ಹೀಗಂತ ಕಂದಾಯ ಇಲಾಖೆಯ ಜುಲೈ ಮಾಸದವರೆಗಿನ ರೈತರ ಆತ್ಮಹತ್ಯೆ ಸಂಬಂಧಿ ಅಂಕಿ-ಅಂಶಗಳೇ ಹೇಳುತ್ತಿವೆ. ರಾಜ್ಯದಲ್ಲಿ ದಶಕದ ಹಿಂದೆ ರೈತರ ಆತ್ಮಹತ್ಯೆ ಪ್ರಮಾಣ ವಿಪರೀತವಿದ್ದು, ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂಬ ಭಾವನೆಯನ್ನೇ ಇವು ಸುಳ್ಳಾಗಿಸಿವೆ.

ಅಂಕಿ-ಅಂಶದ ಪ್ರಕಾರ, ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ವಾರ್ಷಿಕ ಸರಾಸರಿ 1 ಸಾವಿರದಂತೆ 10,371 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, 2023-24ರಿಂದ 2025-26ನೇ ಸಾಲಿನವರೆಗೆ 2,422 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರವಾಹ, ಬರ ಮತ್ತಿತರ ಕಾರಣಗಳಿಂದಾಗಿ ವರ್ಷದಿಂದ ವರ್ಷಕ್ಕೆ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿ ಸಾವಿನ ದಾರಿ ಹಿಡಿಯುವಂತಾಗಿದೆ. ಅದರಲ್ಲೂ ಬೆಳೆದ ಬೆಳೆ ಕೈ ಸೇರದೆ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚುತ್ತಲಿದೆ. 2015-16ರಿಂದ 2024-25ನೇ ಸಾಲಿನವರೆಗೆ 10,371 ರೈತರು ಸಾವಿಗೆ ಶರಣಾಗಿದ್ದಾರೆ. ಅದೇ 2023-24ರಿಂದ 2025-26ರ ಜುಲೈವರೆಗೆ ಒಟ್ಟು 2,422 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಯಾಗಿದೆ. ಅದರಲ್ಲಿ 2,067 ರೈತರು ಸಾಲಬಾಧೆ ಸೇರಿ ಇನ್ನಿತರ ಕಾರಣಗಳಿಂದಾಗಿ ಬದುಕಿಗೆ ಅಂತ್ಯಹಾಡಿದ್ದಾರೆ.

ಹಾವೇರಿಯಲ್ಲಿ ಅತಿಹೆಚ್ಚು ಆತ್ಮಹತ್ಯೆ:ಸರ್ಕಾರದ ದಾಖಲೆಯಂತೆ ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾಖಲೆಗಳ ಪ್ರಕಾರ 2023-24ರಿಂದ ಈವರೆಗೆ 260 ರೈತರು ಜೀವ ಕಳೆದುಕೊಂಡಿದ್ದರೆ, ಅದರಲ್ಲಿ ಸಾಲಬಾಧೆ ಸೇರಿ ಸರ್ಕಾರದಿಂದ ಪರಿಹಾರ ನೀಡಬಹುದಾದ ಕಾರಣಗಳಿಗೆ 228 ರೈತರು ಸಾವಿಗೀಡಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಬೆಳಗಾವಿಯಿದ್ದು, ಒಟ್ಟು 218 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಅದರಲ್ಲಿ 184 ರೈತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ.

ಕೋಲಾರದಲ್ಲಿ ಒಬ್ಬ ರೈತ ಸಾವು:

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೇ ಹೆಚ್ಚಿನ ರೈತ ಆತ್ಮಹತ್ಯೆಗಳು ಉಂಟಾಗಿವೆ. ಉಳಿದಂತೆ ದಕ್ಷಿಣ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಕಡಿಮೆಯಿದೆ. ಅದರಲ್ಲೂ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಕೇವಲ ಒಬ್ಬ ರೈತರ ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 4, ಚಾಮರಾಜನಗರದಲ್ಲಿ 6, ರಾಮನಗರ (ಬೆಂಗಳೂರು ದಕ್ಷಿಣ) 10, ದಕ್ಷಿಣ ಕನ್ನಡ 11, ಕೊಡಗು 12 ರೈತರು ಸಾವಿಗೆ ಶರಣಾಗಿದ್ದಾರೆ.

98 ಕೋಟಿ ರು. ಪರಿಹಾರ:

ಆತ್ಮಹತ್ಯೆಗೆ ಶರಣಾಗುವ ಎಲ್ಲ ರೈತರ ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡುವುದಿಲ್ಲ. ಸಾಲಬಾಧೆಯಂತಹ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡರೆ ಮಾತ್ರ ಅವರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ. ಅದರಂತೆ 2023-24ರಿಂದ 2025-26ರವರೆಗೆ ಆತ್ಮಹತ್ಯೆ ಮಾಡಿಕೊಂಡ 2,422 ರೈತರ ಪೈಕಿ 2,067 ರೈತರ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಒಟ್ಟಾರೆ ಅಷ್ಟು ಪ್ರಮಾಣದ ರೈತ ಕುಟುಂಬಗಳಿಗೆ ತಲಾ 5 ಲಕ್ಷ ರು.ನಂತೆ 98.10 ಕೋಟಿ ರು. ಪರಿಹಾರ ವಿತರಿಸಲಾಗಿದೆ.

-ಬಾಕ್ಸ್‌-

ವರ್ಷದಲ್ಲಿ ಸರಾಸರಿ 1 ಸಾವಿರ ಆತ್ಮಹತ್ಯೆ

ಕಳೆದ 10 ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ತಗ್ಗಿಲ್ಲ. 2015-16ರಿಂದ 2024-25ರವರೆಗೆ ಒಟ್ಟಾರೆ 10,371 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವರ್ಷದ ಅಂಕಿ-ಅಂಶವೂ ಸೇರಿಸಿದರೆ ರೈತರ ಆತ್ಮಹತ್ಯೆ ಸಂಖ್ಯೆ 10,461ಕ್ಕೆ ಏರಿಕೆಯಾಗುತ್ತದೆ. ಅಲ್ಲದೆ, ಹೀಗೆ ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ 9,141 ಅರ್ಹ ಪ್ರಕರಣ ಎಂದು ಕೃಷಿ ಇಲಾಖೆ ಪರಿಗಣಿಸಿ, ಪರಿಹಾರ ನೀಡಲಾಗಿದೆ.

-----

2023-24ರಿಂದ 2025-26ರವರೆಗಿನ ಆತ್ಮಹತ್ಯೆ ಪ್ರಕರಣಗಳು:

ವರ್ಷವರದಿಯಾದ ಪ್ರಕರಣಪರಿಹಾರಕ್ಕೆ ಅರ್ಹ ಪ್ರಕರಣಪರಿಹಾರದ ಮೊತ್ತ

2023-241250108254.10 ಕೋಟಿ ರು.

2024-25108292040.75 ಕೋಟಿ ರು.

2025-2690653.25 ಕೋಟಿ ರು.

ಒಟ್ಟು2,4222,06798.10 ಕೋಟಿ ರು.

-----------

10 ವರ್ಷಗಳಲ್ಲಿನ ರೈತರ ಆತ್ಮಹತ್ಯೆ ವಿವರ:

ವರ್ಷವರದಿಯಾದ ಪ್ರಕರಣಪರಿಹಾರಕ್ಕೆ ಅರ್ಹ ಪ್ರಕರಣ

2015-1615251062

2016-171203932

2017-1813231052

2018-191084866

2019-201091895

2020-21851716

2021-22859702

2022-23968849

2023-2412501082

2024-251082920

2025-269060

ಒಟ್ಟು104619141