ಸಾರಾಂಶ
ನವದೆಹಲಿ: ಕೋಲ್ಕತಾ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ, ಸೋಮವಾರ ವೈದ್ಯರು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಇದರ ಪರಿಣಾಮ ಮುಂಬೈ, ಕೋಲ್ಕತಾ, ದೆಹಲಿ ಸೇರಿದಂತೆ ಹಲವೆಡೆ ವೈದ್ಯಕೀಯ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಸ್ಥಾನಿಕ ವೈದ್ಯರ ಸಂಘ ‘ಫೋಡಾ’ ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಿದ್ದ ಕಾರಣ ದೇಶದ ಪ್ರಮುಖ ನಗರಗಳಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರು. ತುರ್ತು ಸೇವೆಯನ್ನು ಹೊರತು ಪಡಿಸಿ, ಉಳಿದ ವೈದ್ಯಕೀಯ ಸೇವೆಗಳಿಗೆ ಆಸ್ಪತ್ರೆಗಳಲ್ಲಿ ವೈದ್ಯರ ಅಲಭ್ಯತೆ ಎದುರಾಯಿತು. ಘಟನೆಯ ಕೇಂದ್ರ ಬಿಂದುವಾದ ಬಂಗಾಳದಲ್ಲಿ ಕಿರಿಯ ವೈದ್ಯರು, ಟ್ರೈನಿ ವೈದ್ಯರು ನ್ಯಾಯ ಕೊಡಿಸುವಂತೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸಿದರು.ದೆಹಲಿಯಲ್ಲಿ 10 ಸರ್ಕಾರಿ ಕಾಲೇಜಿನ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ದೆಹಲಿಯ ಏಮ್ಸ್ ಕಾಲೇಜಿನ ವೈದ್ಯರು ಕೂಡ ತಮ್ಮ ಸೇವೆಗಳನ್ನು ಬಹಿಷ್ಕರಿಸಿದರು, ಮುಂಬೈನಲ್ಲಿಯೂ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಇನ್ನು ಆಸ್ಪತ್ರೆಗಳಲ್ಲಿ ಒಪಿಡಿ ಸೇರಿದಂತೆ ಹಲವು ಸೇವೆಗಳು ಸ್ಥಗಿತಗೊಂಡಿದ್ದವು.
ಶಾಗೆ ಐಎಂಎ ಪತ್ರ:
ಇದೇ ವೇಳೆ ಭಾರತೀಯ ವೈದ್ಯ ಸಂಸ್ಥೆ (ಐಎಂಎ) ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದು, ಇಂಥ ಘಟನೆ ಮರುಕಳಿಸದಂತೆ ಕ್ರಮಕ್ಕೆ ಆಗ್ರಹಿಸಿದೆ.ವೈದ್ಯೆ ರೇಪ್ ತನಿಖೆ ಸಿಬಿಐಗೆ: ಮಮತಾ ಇಂಗಿತಕೋಲ್ಕತಾ: ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ‘1 ವಾರದೊಳಗೆ ಪೊಲೀಸರು ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸದಿದ್ದಲ್ಲಿ ಸಿಬಿಐ ತನಿಖೆಗೆ ವಹಿಸುತ್ತೇನೆ’ ಎಂದು ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಸೋಮವಾರ ಮಾತನಾಡಿದ ಮಮತಾ, ಪ್ರಕರಣದ ತನಿಖೆಯನ್ನು ಆದಷ್ಟು ಶೀಘ್ರ ಮುಕ್ತಾಯಗೊಳಿಸಬೇಕೆಂದು ಪೊಲೀಸರಿಗೆ ಸೂಚಿಸಿದರು. ‘ ಒಂದು ವೇಳೆ ಪೊಲೀಸರು ಭಾನುವಾರದೊಳಗೆ ಈ ಪ್ರಕರಣವನ್ನು ಪೂರ್ಣಗೊಳಿಸಲು ವಿಫಲರಾದರೆ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತೇವೆ. ಆದರೂ ಸಿಬಿಐ ಯಶಸ್ಸಿನ ಪ್ರಮಾಣವೂ ಅತಿ ಕಡಿಮೆ ಮಟ್ಟದಲ್ಲಿದೆ’ ಎಂದರು.ದೀದಿ, ಎನ್‌ಸಿಡಬ್ಲು ಭೇಟಿ:ಇನ್ನು ಮಮತಾ ಬ್ಯಾನರ್ಜಿ ಹಾಗೂ ದಿಲ್ಲಿಯ ರಾಷ್ಟ್ರೀಯ ಮಹಿಳಾ ಆಯೋಗದ ತಂಡ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ, ಮೃತ ವೈದ್ಯೆ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬೇಕಿದ್ದರೆ ನನ್ನನ್ನು ಗಲ್ಲಿಗೇರಿಸಿ: ವೈದ್ಯೆಯ ರೇಪಿಸ್ಟ್ ಹೇಳಿಕೆ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ 31 ವರ್ಷದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಪ್ರಕರಣದ ಆರೋಪಿ ಸಂಜಯ್ ರಾಯ್ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ‘ಬೇಕಿದ್ದರೆ ನನ್ನನ್ನು ಗಲ್ಲಿಗೇರಿಸಿ’ ಎಂದು ಕೊಂಚವೂ ಪಶ್ಚಾತ್ತಾಪವಿಲ್ಲದೇ ಉದ್ಧಟತನದಿಂದ ಉತ್ತರಿಸಿದ್ದಾನೆ ಎನ್ನಲಾಗಿದೆ.
ಸಂಜಯ್‌ಗೆ ಪೊಲೀಸರು ಈ ವೇಳೆಯಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆಗ ತಾನೇ ಈ ಹೀನ ಕೃತ್ಯವನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಈ ಸಂದರ್ಭದಲ್ಲಿ ಆತನಲ್ಲಿ ಕೊಂಚವೂ ಪಶ್ಚಾತ್ತಾಪ ಕಂಡು ಬಂದಿಲ್ಲ. ಬದಲಿಗೆ ಪೊಲೀಸರ ಮುಂದೆಯೂ ಉದ್ಧಟತನ ಮೆರೆದಿದ್ದು, ಬೇಕಿದ್ದರೆ ತನ್ನನ್ನು ಗಲ್ಲಿಗೇರಿಸಿ ಎಂದು ಅಸಡ್ಡೆಯಿಂದ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಪೊಲೀಸರ ವಿಚಾರಣೆ ಈತನ ಕುರಿತು ಹಲವು ವಿಚಾರಗಳು ಬಯಲಾಗಿದೆ. ಆರೋಪಿ ಹೀನ ಕೃತ್ಯವನ್ನು ನಡೆಸಿದ ಬಳಿಕ ಮನೆಗೆ ಹೋಗಿದ್ದ . ಸಾಕ್ಷ್ಯನಾಶಕ್ಕಾಗಿ ಬಟ್ಟೆ ಒಗೆದು ಹಾಗೂ ಶೂಗಳಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗಳಿಸಿದ್ದ. ಅಲ್ಲದೆ, ಅವನ ಮೊಬೈಲ್‌ನಲ್ಲಿಯೂ ಅಶ್ಲೀಲತೆಗೆ ಸಂಬಂಧಿಸಿದ ಹಲವು ವಿಡಿಯೋಗಳಿರುವುದು ಬಯಲಾಗಿದೆ.