ಇಸ್ರೇಲ್‌ ವರ್ಸಸ್‌ ಹಮಾಸ್‌ ಉಗ್ರರಸಂಘರ್ಷಕ್ಕೆ 1000+ ಜನರು ಬಲಿ!

| Published : Oct 09 2023, 12:45 AM IST / Updated: Oct 09 2023, 03:54 PM IST

Palastine Protest
ಇಸ್ರೇಲ್‌ ವರ್ಸಸ್‌ ಹಮಾಸ್‌ ಉಗ್ರರಸಂಘರ್ಷಕ್ಕೆ 1000+ ಜನರು ಬಲಿ!
Share this Article
  • FB
  • TW
  • Linkdin
  • Email

ಸಾರಾಂಶ

ಸಂಘರ್ಷ ಮುಂದುವರೆದ ಬೆನ್ನಲ್ಲೇ ಉಭಯ ದೇಶಗಳಲ್ಲಿ ಈವರೆಗೆ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 1000 ಮತ್ತು ಗಾಯಾಳುಗಳ ಸಂಖ್ಯೆ 4000 ದಾಟಿದೆ.

ಟೆಲ್‌ ಅವಿವ್‌: ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ, ಅದಕ್ಕೆ ಪ್ರತಿಯಾಗಿ ಇಸ್ರೇಲ್‌ನ ಪ್ರತಿದಾಳಿಯಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷ ಸತತ 2ನೇ ದಿನವಾದ ಭಾನುವಾರವೂ ಮುಂದುವರೆದಿದೆ. ಸಂಘರ್ಷ ಮುಂದುವರೆದ ಬೆನ್ನಲ್ಲೇ ಉಭಯ ದೇಶಗಳಲ್ಲಿ ಈವರೆಗೆ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 1000 ಮತ್ತು ಗಾಯಾಳುಗಳ ಸಂಖ್ಯೆ 4000 ದಾಟಿದೆ. ಈ ಪೈಕಿ 2 ದಿನಗಳ ಸಂಘರ್ಷದಲ್ಲಿ ಹಮಾಸ್‌ ದಾಳಿಯಲ್ಲಿ 600 ಇಸ್ರೇಲಿ ಜನರು ಸಾವನ್ನಪ್ಪಿದ್ದಾರೆ ಹಾಗೂ 2000 ಜನ ಗಾಯಗೊಂಡಿದ್ದಾರೆ. 100 ಇಸ್ರೇಲಿಗಳನ್ನು ಹಮಾಸ್‌ ಒತ್ತೆಯಾಗಿಟ್ಟುಕೊಂಡಿದೆ ಎಂದು ಇಸ್ರೇಲ್‌ ಹೇಳಿದ್ದರೆ, 400ಕ್ಕೂ ಹೆಚ್ಚು ಹಮಾಸ್‌ ಉಗ್ರರನ್ನು ಹತ್ಯೆಗೈದಿದ್ದಾಗಿ ಇಸ್ರೇಲ್‌ ಸೇನೆ ಘೋಷಿಸಿದೆ. ಈ ನಡುವೆ ಉಭಯ ದೇಶಗಳ ಸಂಘರ್ಷಕ್ಕೆ ಇದೀಗ ನೆರೆಯ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಕೂಡ ಸೇರಿಕೊಂಡಿದ್ದು, ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ಆರಂಭಿಸಿದ್ದಾರೆ. ಅವರ ವಿರುದ್ಧವೂ ಇಸ್ರೇಲ್‌ ಸೇನೆ ಹೋರಾಟ ಆರಂಭಿಸಿದೆ. 

ಹೀಗಾಗಿ ಸಂಘರ್ಷ ಇನ್ನಷ್ಟು ದಿನ ಮುಂದುವರೆಯುವ ಜೊತೆಗೆ ಸಾಕಷ್ಟು ಸಾವು-ನೋವಿಗೆ ಸಾಕ್ಷಿಯಾಗುವ ಎಲ್ಲಾ ಆತಂಕಗಳನ್ನೂ ಹುಟ್ಟುಹಾಕಿದೆ. ಇದಕ್ಕೆ ಪೂರಕವಾಗಿ ‘ಇದು ಸುದೀರ್ಘ ಕದನ ಆದೀತು. ಹಮಾಸ್‌ ನೆಲೆಗಳನ್ನು ನಾಶ ಮಾಡುತ್ತೇವೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ‘ದೇಶ ಯುದ್ಧ ನಡೆಸುತ್ತಿದೆ’ ಎಂಬ ಸಂಪುಟ ನಿರ್ಣಯವನ್ನುಇಸ್ರೇಲ್‌ ಸಂಪುಟ ಕೈಗೊಂಡಿದೆ. ಈ ಸಾವು-ನೋವಿನ ನಡುವೆಯೇ ವಯಸ್ಕರು, ಮಕ್ಕಳು, ವೃದ್ಧರು, ಮಹಿಳೆಯರನ್ನು ಹಮಾಸ್‌ ಉಗ್ರರು ಹತ್ಯೆಗೈದ, ಭೀಕರವಾಗಿ ನಡೆಸಿಕೊಂಡ, ಅಪಹರಿಸಿದ ಮತ್ತೊಂದಿಷ್ಟು ವಿಡಿಯೋಗಳು ಬಿಡುಗಡೆಯಾಗಿದ್ದು, ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದೆ. ಡಬಲ್‌ ದಾಳಿ: ಹಮಾಸ್‌ ಉಗ್ರರ ವಿರುದ್ಧ ತನ್ನ ದಾಳಿ ತೀವ್ರಗೊಳಿಸಿರುವ ಇಸ್ರೇಲಿ ಪಡೆಗಳು ಭಾನುವಾರ ದಕ್ಷಿಣ ಇಸ್ರೇಲ್‌ನ ಹಲವು ನಗರಗಳಿಗೆ ನುಸುಳಿರುವ ಹಮಾಸ್‌ ಉಗ್ರರು ಮತ್ತು ಅವರ ಬೆಂಬಲಿಗರನ್ನು ಮಟ್ಟಹಾಕುವ ಕೆಲಸ ಚುರುಕುಗೊಳಿಸಿವೆ. ಇದರ ಭಾಗವಾಗಿ ಡ್ರೋನ್‌ ದಾಳಿ ನಡೆಸಿ ಉಗ್ರರ ನೆಲೆಗಳು ಹಾಗೂ ಉಗ್ರರ ವಾಹನಗಳನ್ನು ಧ್ವಂಸಗೊಳಿಸಿದ ಹಲವು ವಿಡಿಯೋಗಳು ಬಹಿರಂಗವಾಗಿವೆ. ಮತ್ತೊಂದೆಡೆ ಹಮಾಸ್‌ ಉಗ್ರರು ದಾಳಿಗೆ ನೆಲೆಯಾಗಿಸಿಕೊಂಡಿದ್ದ ಗಾಜಾಪಟ್ಟಿ ಪ್ರದೇಶದ ಮೇಲೆ ಇಸ್ರೇಲಿ ಪಡೆಗಳು ಭಾನುವಾರ ಭಾರೀ ಪ್ರಮಾಣದ ದಾಳಿ ನಡೆಸಿವೆ. ಹಮಾಸ್‌ ಉಗ್ರರ ಕಾರ್ಯಾಚರಣೆಯ ಕೇಂದ್ರಬಿಂದುವಾಗಿದ್ದ ಕಚೇರಿ ಸೇರಿದಂತೆ, ಉಗ್ರರ ಹಲವು ಅಡಗುತಾಣಗಳು ಈ ದಾಳಿಯಲ್ಲಿ ಧ್ವಂಸವಾಗಿದೆ. 

ಗಾಜಾವೊಂದರಲ್ಲೇ 420ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇಸ್ರೇಲಿ ಪಡೆಗಳ ದಾಳಿ ತೀವ್ರವಾಗುತ್ತಿದ್ದಂತೆ ಗಾಜಾಪಟ್ಟಿ ಗಡಿಯ 20 ಸಾವಿರಕ್ಕೂ ಹೆಚ್ಚು ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ. ಗಡಿ ಭಾಗದ ಜನರಿಗೆ ಮನೆ ಖಾಲಿ ಮಾಡುವಂತೆ ಇಸ್ರೇಲಿ ಸೇನೆ ಎಚ್ಚರಿಕೆ ನೀಡಿ ಬಳಿಕ ದಾಳಿ ನಡೆಸುತ್ತಿದೆ. ಈ ಪ್ರದೇಶದಿಂದ ಇನ್ನಷ್ಟು ಜನರು ತೆರವುಗೊಂಡ ಬಳಿಕ ಅಲ್ಲಿಗೆ ಇಸ್ರೇಲಿ ಭೂಸೇನೆ ದಾಳಿ ಮಾಡಲಿದೆ ಎನ್ನಲಾಗಿದೆ. ಹೀಗಾಗಿದ್ದೇ ಆದಲ್ಲಿ ಹಮಾಸ್‌ ಭಾರೀ ಪ್ರಮಾಣದ ಏಟು ತಿನ್ನುವ ಜೊತೆಗೆ ಸಾವು-ನೋವಿನಲ್ಲಿ ಭಾರೀ ಏರಿಕೆಯಾಗಲಿದೆ ಎನ್ನಲಾಗಿದೆ. 

ಗಾಜಾದಲ್ಲಿ ಕಗ್ಗತ್ತಲು: ಸಂಘರ್ಷ ತೀವ್ರವಾದ ಬೆನ್ನಲ್ಲೇ, ಶನಿವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಗಾಜಾ ಪ್ರದೇಶಕ್ಕೆ ವಿದ್ಯುತ್‌ ಪೂರೈಕೆಯನ್ನು ಇಸ್ರೇಲ್‌ ಸ್ಥಗಿತಗೊಳಿಸಿದೆ. ಅಲ್ಲದೆ ಇಂಧನ ಮತ್ತು ಇತರೆ ಆಹಾರ ಸಾಮಗ್ರಿಗಳ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾಗಿ ಘೋಷಿಸಿದೆ. ಹೀಗಾಗಿ ಗಾಜಾ ಪ್ರದೇಶ ಶನಿವಾರ ಪೂರ್ಣ ಕಗ್ಗತ್ತಲಿಗೆ ಸಿಕ್ಕಿಹಾಕಿಕೊಂಡಿತ್ತು. ಜೊತೆಗೆ ಸಂಘರ್ಷ ಮುಂದುವರೆದರೆ ಇಂಧನ, ಅಗತ್ಯ ಆಹಾರ ವಸ್ತುಗಳ ಕೊರತೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಮಾಸ್‌ಗೆ ಹಿಜ್ಬುಲ್ಲಾ ನೆರವು: ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರ ಜೊತೆಗೆ ಸಂಘರ್ಷ ಆರಂಭವಾಗಿರುವ ಹೊತ್ತಿನಲ್ಲೇ ಉತ್ತರ ಇಸ್ರೇಲ್‌ನ ಗಡಿಯಲ್ಲಿನ ವಿವಾದಿತ ಪ್ರದೇಶದಲ್ಲಿ ಹಿಜ್ಬುಲ್ಲಾ ಉಗ್ರರು ಕೂಡ ಇಸ್ರೇಲಿಗಳ ಮೇಲೆ ರಾಕೆಟ್‌, ಶೆಲ್‌ ಮತ್ತು ಗುಂಡಿನ ದಾಳಿ ಆರಂಭಿಸಿದ್ದಾರೆ. ಲೆಬನಾನ್‌ನ ಹಿಜ್ಬುಲ್ಲಾ ಉಗ್ರರಿಗೆ ನೆರೆಯ ಇರಾನ್‌ನ ಬೆಂಬಲ ಕೂಡಾ ಇದ್ದು ಅವರ ಬಳಿ ಸಾವಿರಾರು ರಾಕೆಟ್‌ಗಳ ಸಂಗ್ರಹವಿದೆ ಎನ್ನಲಾಗಿದೆ. ಹೀಗಾಗಿ ದಕ್ಷಿಣದಲ್ಲಿ ಹಮಾಸ್‌ ಜೊತೆ ಕಾದಾಟ ನಡೆಸುತ್ತಿರುವ ಇಸ್ರೇಲಿ ಪಡೆಗಳು ಉತ್ತರದಲ್ಲಿ ಹಿಜ್ಬುಲ್ಲಾ ಉಗ್ರರಿಗೂ ತಿರುಗೇಟು ನೀಡುವ ಯತ್ನ ಮಾಡುತ್ತಿದ್ದಾರೆ. 

 

ಬೆಂಬಲಿಗರ ಬಿಡಿಸಿಕೊಳ್ಳಲು ಇಸ್ರೇಲಿಗಳ ಒತ್ತೆ: ದಾಳಿ ವೇಳೆ ಹಮಾಸ್‌ ಉಗ್ರರು ಭಾರೀ ಪ್ರಮಾಣದಲ್ಲಿ ಇಸ್ರೇಲಿ ಯೋಧರು, ನಾಗರಿಕರನ್ನು ಅಪಹರಿಸಿ ಒತ್ತೆ ಇಟ್ಟುಕೊಂಡಿದ್ದಾರೆ. ಇವರಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ. ‘ನಮ್ಮ 100 ಮಂದಿಯನ್ನು ಹಮಾಸ್‌ ಒತ್ತೆ ಇರಿಸಿಕೊಂಡಿದೆ’ ಎಂದು ಇಸ್ರೇಲ್‌ ಹೇಳಿದೆ. ಈ ಒತ್ತೆ ಹಿಂದೆ, ಇಸ್ರೇಲಿ ಸೇನೆ ವಶದಲ್ಲಿರುವ ತನ್ನ ಸಾವಿರಾರು ಕಾರ್ಯಕರ್ತರನ್ನು ಬಿಡಿಸಿಕೊಳ್ಳುವ ತಂತ್ರವನ್ನು ಹಮಾಸ್‌ ಉಗ್ರರು ಹೊಂದಿದ್ದಾರೆ ಎನ್ನಲಾಗಿದೆ. ಈ ನಡುವೆ ಈಜಿಪ್ಟ್‌ ಗುಪ್ತಚರ ಇಲಾಖೆ, ಹಮಾಸ್‌ ಮತ್ತು ಪ್ಯಾಲೆಸ್ತೀನ್‌ ಇತರ ಧಾರ್ಮಿಕ ಸಂಘಟನೆಗಳ ಜೊತೆ ಹಿಂಬಾಗಿಲ ಮಾತುಕತೆ ನಡೆಸಿ, ಅಪಹೃತರ ಕುರಿತ ಮಾಹಿತಿ ಪಡೆಯುವ ಯತ್ನ ಮಾಡಿದೆ. ಈ ಹಿಂದೆ ಕೂಡ ಉಭಯ ದೇಶಗಳ ನಡುವೆ ಸಂಘರ್ಷ ಎದ್ದಾಗ ಈಜಿಪ್ಟ್‌ ಮಧ್ಯಸ್ಥಿಕೆ ವಹಿಸಿತ್ತು.