ಸಾರಾಂಶ
ಸಂಭಾಜಿನಗರ(ಮಹಾರಾಷ್ಟ್ರ): ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ ಬರುವ 8 ಜಿಲ್ಲೆಗಳಲ್ಲಿ 2023ರಲ್ಲಿ ಒಟ್ಟು 1,088 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾವಿನ ಪ್ರಮಾಣದಲ್ಲಿ ಶೇ.65ರಷ್ಟು ಹೆಚ್ಚಳವಾಗಿದೆ ಎಂದು ವರದಿಯೊಂದು ತಿಳಿಸಿದೆ. ಮರಾಠವಾಡ ದೇಶದಲ್ಲೇ ಅತಿ ಹೆಚ್ಚು ರೈತರ ಆತ್ಮಹತ್ಯೆಗೆ ಸಾಕ್ಷಿಯಾಗುವ ಪ್ರದೇಶಗಳ ಪೈಕಿ ಒಂದು.
ವಿಭಾಗೀಯ ಆಯುಕ್ತರ ಕಚೇರಿ ಬಿಡುಗಡೆ ಮಾಡಿರುವ ವರದಿ ಅನ್ವಯ, 2023ರಲ್ಲಿ ಬೀಡ್ ಜಿಲ್ಲೆಯಲ್ಲಿ ಅತಿ ಹೆಚ್ಚು 269 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉಳಿದಂತೆ ಸಂಭಾಜಿನಗರದಲ್ಲಿ 182, ನಾಂದೇಡ್‌ನಲ್ಲಿ 75, ಧರಾಶಿವದಲ್ಲಿ 171, ಪರ್ಭಾನಿಯಲ್ಲಿ 103, ಜಲ್ನಾದಲ್ಲಿ 74, ಲಾತೂರ್‌ನಲ್ಲಿ 72, ಮತ್ತು ಹಿಂಗೋಲಿಯಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಪೈಕಿ ಪರಿಹಾರಕ್ಕೆ ಅರ್ಹವಾಗಿದ್ದ 777 ರೈತರ ಕುಟುಂಬಕ್ಕೆ ತಲಾ 1 ಲಕ್ಷ ರು. ನೀಡಲಾಗಿದೆ. ಅಲ್ಲದೆ ಇನ್ನೂ 151 ಪ್ರಕರಣಗಳಲ್ಲಿ ಪರಿಹಾರದ ಅರ್ಹತೆಯ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.