ಸಾರಾಂಶ
ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿಯ ಗುಂಡಿಗೆ 10 ನಕ್ಸಲರು ಹತರಾಗಿದ್ದು, 16 ಮಂದಿ ಶರಣಾಗತರಾಗಿದ್ದಾರೆ.
ರಾಯ್‌ಪುರ್: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ಮಂಗಳವಾರ ನಡೆಸಿದ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಮೂವರು ಮಹಿಳೆಯರ ಸೇರಿದಂತೆ ಒಟ್ಟು 10 ನಕ್ಸಲರು ಬಲಿಯಾಗಿದ್ದಾರೆ. ಇದರೊಂದಿಗೆ ಈ ವರ್ಷ ರಾಜ್ಯದಲ್ಲಿ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದ ನಕ್ಸಲರ ಸಂಖ್ಯೆ 89ಕ್ಕೆ ಏರಿದೆ.
ನಕ್ಸಲೀಯರ ಭದ್ರಕೋಟೆಯಾದ ಕಂಕೇರ್ ಜಿಲ್ಲೆಯ ಟೆಕ್ಮೆಟಾ ಮತ್ತು ಕಾಕೂರು ಗ್ರಾಮಗಳ ಆಸುಪಾಸಿನಲ್ಲಿ ನಕ್ಸಲರ ಚಲನವಲನದ ಕುರಿತು ಮಾಹಿತಿ ಪಡೆದ ಭದ್ರತಾ ಪಡೆಗಳು ಸೋಮವಾರ ಸಂಜೆಯಿಂದಲೇ ಕೂಂಬಿಂಗ್ ಆರಂಭಿಸಿದ್ದರು. ಈ ನಡುವೆ ಮಂಗಳವಾರ ಬೆಳಗ್ಗೆ 6 ಗಂಟೆ ವೇಳೆಗೆ ಭದ್ರತಾ ಪಡೆಗಳಿಗೆ ನಕ್ಸಲರು ಮುಖಾಮುಖಯಾಗಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿ ವೇಳೆ 10 ನಕ್ಸಲರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಎಕೆ-47 ರೈಫಲ್, ಮದ್ದುಗುಂಡುಗಳು ಮತ್ತು ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.ಏ.16ರಂದು ನಡೆದ ಇದೇ ರೀತಿಯ ಕಾರ್ಯಾಚರಣೆಯಲ್ಲಿ 29 ನಕ್ಸಲರು ಬಲಿಯಾಗಿದ್ದರು.
16 ನಕ್ಸಲರು ಶರಣುಛತ್ತೀಸ್ಗಢದಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡುವೆ ಸುಮಾರು 16 ಮಂದಿ ನಕ್ಸಲರು ಮಂಗಳವಾರ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ ಇಬ್ಬರು ನಕ್ಸಲರ ಸುಳಿವಿಗೆ 13 ಲಕ್ಷ ರು. ಬಹಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.