ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಉಡಾವಣೆಯಾಗಿದ್ದ ಇಸ್ರೋದ ಈ ವರ್ಷದ ಮೊದಲ ಉಪಗ್ರಹವು ಪಿಎಸ್‌ಎಲ್‌ವಿ-ಸಿ62 ರಾಕೆಟ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ 3ನೇ ಹಂತದಲ್ಲಿ ವಿಫಲವಾಗಿದೆ.
ಶ್ರೀಹರಿಕೋಟಾ (ಆಂಧ್ರಪ್ರದೇಶ) : ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಉಡಾವಣೆಯಾಗಿದ್ದ ಇಸ್ರೋದ ಈ ವರ್ಷದ ಮೊದಲ ಉಪಗ್ರಹವು ಪಿಎಸ್‌ಎಲ್‌ವಿ-ಸಿ62 ರಾಕೆಟ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ 3ನೇ ಹಂತದಲ್ಲಿ ವಿಫಲವಾಗಿದೆ. ಇದು ವಿದೇಶಿ ಭೂ ವೀಕ್ಷಣಾ ಉಪಗ್ರಹ ಸೇರಿದಂತೆ 16 ಉಪಗ್ರಹಗಳನ್ನು ಹೊತ್ತು ನಭಕ್ಕೆ ಜಿಗಿದಿತ್ತು.
ಸೋಮವಾರ ಬೆಳಿಗ್ಗೆ 10:18ಕ್ಕೆ ರಾಕೆಟ್ ಉಡಾವಣೆಯಾಯಿತು. ಇದರಲ್ಲಿ ಒಟ್ಟು 16 ಉಪಗ್ರಹಗಳಿದ್ದವು. ಇವುಗಳನ್ನು 12 ಕಿ.ಮೀ. ಎತ್ತರದ ಸೂರ್ಯನ ಸಮಾನಾಂತರ ಕಕ್ಷೆಗೆ ಇರಿಸುವುದು ಗುರಿಯಾಗಿತ್ತು. ರಾಕೆಟ್‌ನ ಮೊದಲ ಮತ್ತು 2ನೇ ಹಂತಗಳು ಸರಿಯಾಗಿ ಕೆಲಸ ಮಾಡಿದವು. ಆದರೆ 3ನೇ ಹಂತದ ಕೊನೆಯ ಭಾಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ, ಹಾರಾಟದಲ್ಲಿ ವ್ಯತ್ಯಾಸ ಉಂಟಾಯಿತು. ಹಾಗಾಗಿ ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂದು ಇಸ್ರೋ ಮಾಹಿತಿ ನೀಡಿದೆ. ’ಈ ಬಗ್ಗೆ ಡೇಟಾ ವಿಶ್ಲೇಷಣೆ ಮಾಡುತ್ತಿದ್ದೇವೆ’ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.
ಪಿಎಸ್‌ಎಲ್‌ವಿ 5ನೇ ವೈಫಲ್ಯ
ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್ 2025ರ ಮೇನಲ್ಲೂ ವಿಫಲವಾಗಿತ್ತು. 3ನೇ ಹಂತದಲ್ಲಿ ಒತ್ತಡ ಕುಸಿತವುಂಟಾಗಿ ಇಒಎಸ್-09 ಉಪಗ್ರಹ ಕಕ್ಷೆಗೆ ತಲುಪಲು ಸಾಧ್ಯವಾಗಿರಲಿಲ್ಲ. ಈ ಬಾರಿಯೂ 3ನೇ ಹಂತದಲ್ಲಿಯೇ ದೋಷಕ್ಕೆ ತುತ್ತಾಗಿದೆ. ಈ ರಾಕೆಟ್ ಮೂಲಕ ಇಸ್ರೋ ಒಟ್ಟು 64 ಉಡಾವಣೆಗಳನ್ನು ಮಾಡಿದೆ. ಅವುಗಳಲ್ಲಿ ಸೋಮವಾರದ್ದೂ ಸೇರಿದಂತೆ ಒಟ್ಟು 5 ರಾಕೆಟ್‌ಗಳು ವಿಫಲವಾಗಿವೆ. ಇದು ಪಿಎಸ್‌ಎಲ್‌ವಿ ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಕುರಿತು ಅನುಮಾನ ಮೂಡಿಸಿವೆ.
ಬೆಂಗಳೂರಿನ ಉಪಗ್ರಹವೂ ಇತ್ತು
ಸೋಮವಾರ ಉಡಾವಣಾ ವೈಫಲ್ಯ ಅನುಭವಿಸಿದ ಪಿಎಸ್‌ಎಲ್‌ವಿ-ಸಿ62 ರಾಕೆಟ್‌ನಲ್ಲಿದ್ದ 16 ಉಪಗ್ರಹಗಳಲ್ಲಿ ಬೆಂಗಳೂರಿನ ದಯಾನಂದ ಸಾಗರ್ ವಿವಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಡಿಸ್ಯಾಟ್-1 ಉಪಗ್ರಹವೂ ಇತ್ತು. ಮೊದಲ ಬಾರಿ ಕಾಲೇಜು ಇಂಥ ಸಾಹಸ ಮಾಡಿತ್ತು. ಆದರೆ ಉಡಾವಣಾ ವೈಫಲ್ಯವು ಅವರನ್ನು ನಿರಾಸೆಗೊಳಿಸಿದೆ.

