ಸಾರಾಂಶ
ವಾಷಿಂಗ್ಟನ್: ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಚಾರ ಮಾಡಿದ್ದ ‘ಮ್ಯಾಜಿಕ್ ಔಷಧಿ’ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯೂ) ಬರೋಬ್ಬರಿ 17,000 ಜನರ ಸಾವಿಗೆ ಕಾರಣವಾಗಿದೆ. ಈ ಪೈಕಿ ಅಮೆರಿಕದಲ್ಲೇ ಅತಿ ಹೆಚ್ಚು 12,739 ಜನರು ಸಾವನ್ನಪ್ಪಿದ್ದಾರೆ ಎಂಬ ಭಯಾನಕ ಅಂಶವನ್ನು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ಕೋವಿಡ್ ಗುಣಪಡಿಸಲು ಸಂಧಿವಾತ ಮತ್ತು ಮಲೇರಿಯಾ ಔಷಧಿಯಾಗಿ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಸೇವಿಸಿ ಎಂದು ಟ್ರಂಪ್ ಅಮೆರಿಕನ್ನರಿಗೆ ಕರೆ ನೀಡಿದ್ದರು. ಅಲ್ಲದೇ ಸ್ವತಃ ತಾವೂ ಈ ಔಷಧಿ ಬಳಸುತ್ತಿದ್ದಾಗಿ ತಿಳಿಸಿದ್ದರು. ಆದರೆ ಕೋವಿಡ್‌ಗೆ ಎಚ್‌ಸಿಕ್ಯೂ ಔಷಧಿ ಬಳಸಬೇಕೆಂಬ ವದಂತಿಗಳ ಬಳಿಕ, ಕೋವಿಡ್ ಮೊದಲನೇಯ ಅಲೆಯ ಮಾರ್ಚ್ 2020ರಿಂದ ಜುಲೈ 2020ರ ಕೇವಲ ಐದು ತಿಂಗಳ ಅವಧಿಯಲ್ಲಿ 6 ದೇಶಗಳಲ್ಲಿ ಸುಮಾರು 17,000 ಜನರು ಸಾವನ್ನಪ್ಪಿದ್ದಾರೆ ಎಂದು ಫ್ರೆಂಚ್ ಸಂಶೋಧಕರು ನಡೆಸಿದ ಹೊಸ ಅಧ್ಯಯನ ವರದಿ ಹೇಳಿದೆ.
ಈ ಪೈಕಿ ಅಮೆರಿಕದಲ್ಲಿ 12,739, ಸ್ಪೇನ್‌ನಲ್ಲಿ 1,895, ಇಟಲಿಯಲ್ಲಿ 1,822, ಬೆಲ್ಜಿಯಂನಲ್ಲಿ 240, ಫ್ರಾನ್ಸ್‌ನಲ್ಲಿ 199, ಮತ್ತು ಟರ್ಕಿಯಲ್ಲಿ 95 ಜನ ಸಾವನ್ನಪ್ಪಿದ್ದಾರೆ. ಜೂನ್ 2020 ರಲ್ಲಿ, ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಸೇರಿದಂತೆ ಹಲವಾರು ಅಧ್ಯಯನಗಳು ಕೋವಿಡ್ ಗುಣಪಡಿಸಲು ಎಚ್‌ಸಿಕ್ಯೂ ಔಷಧದಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಅದು ಸಾವಿನ ಅಪಾಯ ತಂದೊಡ್ಡುತ್ತಿದೆ ಎಂದು ಹೇಳಿದ್ದವು.