ರಸ್ತೆ ನಿರ್ಮಾಣಕ್ಕೆ ವಿರೋಧ: ಮಹಿಳೆಯರ ಮೇಲೆ ಲಾರಿ ಚಾಲಕನಿಂದ ಮಣ್ಣು ಸುರಿದು ಹೂಳಲು ಯತ್ನ!

| Published : Jul 22 2024, 01:25 AM IST / Updated: Jul 22 2024, 04:53 AM IST

ಸಾರಾಂಶ

ಖಾಸಗಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿದ್ದಕ್ಕೆ ಮಹಿಳೆಯರ ಮೇಲೆ ಲಾರಿ ಚಾಲಕ ಮಣ್ಣು ಹಾಕಿ ಸೊಂಟದವರೆಗೆ ಹೂತು ಹಾಕಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಭೋಪಾಲ್‌: ಖಾಸಗಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿದ್ದಕ್ಕೆ ಮಹಿಳೆಯರ ಮೇಲೆ ಲಾರಿ ಚಾಲಕ ಮಣ್ಣು ಹಾಕಿ ಸೊಂಟದವರೆಗೆ ಹೂತು ಹಾಕಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಮತಾ ಪಾಂಡೆ ಹಾಗೂ ಆಶಾ ಪಾಂಡೆ ಎಂಬ ಇಬ್ಬರು ಮಹಿಳೆಯರು ಕುಟುಂಬದ ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಾಣವನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದರು. 

ಇದನ್ನು ವಿರೋಧಿಸಿದ ಟ್ರಕ್‌ ಚಾಲಕ, ಪ್ರತಿಭಟನಾನಿರತ ಮಹಿಳೆಯರ ಮೇಲೆಯೇ ಟ್ರಕ್‌ ಮೂಲಕ ಮಣ್ಣು ಸುರಿಸಿ ಹೂತು ಹಾಕಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೆ ಇದ್ದ ಸ್ಥಳೀಯರು ಇಬ್ಬರು ಮಹಿಳೆಯರನ್ನು ರಕ್ಷಿಸಿ, ಟ್ರಕ್ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ನೇಣು ಹಾಕಿಕೊಂಡ ರೀತಿ ರೀಲ್ಸ್‌ ಮಾಡಲು ಹೋಗಿ 11ರ ಬಾಲಕ ಆಕಸ್ಮಿಕ ಸಾವು 

ಮೊರೆನಾ: ಬಾಲಕನೊಬ್ಬ ತಮಾಷೆಗಾಗಿ ಸಾಮಾಜಿಕ ಜಾಲತಾಣದಲ್ಲಿ ನೇಣು ಬಿಗಿದುಕೊಳ್ಳುವ ರೀತಿ ರೀಲ್ಸ್‌ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಭಾನುವಾರ ಮಧ್ಯಪ್ರದೇಶದಲ್ಲಿ ನಡೆದಿದೆ.

 ಕರಣ್ ಪರ್ಮಾರ್(11) ಮೃತ ಬಾಲಕ. ಮನೆಯ ಸಮೀಪದ ಮರವೊಂದರ ಬಳಿ ಸ್ನೇಹಿತರ ಜೊತೆಗೆ ತೆರಳಿದ್ದ ಕರಣ್‌, ತಾನು ಮರಕ್ಕೆ ನೇಣು ಹಾಕಿಕೊಂಡಂತೆ ನಟಿಸುವುದಾಗಿ ಹೇಳಿ ಸ್ನೇಹಿತರಿಗೆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಹೇಳಿದ್ದ. 

ಅದರಂತೆ ಆತ ನೇಣು ಬಿಗಿದುಕೊಂಡು ನೋವಿನಿಂದ ಒದ್ದಾಡುವ ರೀತಿ ಮಾಡಿದ್ದಾನೆ. ಕೆಲ ಸಮಯದ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮೊದಲಿಗೆ ಸ್ನೇಹಿತರೆಲ್ಲಾ ಇದು ಆತನ ನಟನೆ ಎಂದೇ ತಿಳಿದಿದ್ದರು. ಆದರೆ ಎಷ್ಟು ಹೊತ್ತಾದರೂ ಆತ ಅಲ್ಲಾಡದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದಾಗ ದುರಂತ ಬೆಳಕಿಗೆ ಬಂದಿದೆ. ಕೂಡಲೇ ಆತನ ನೇಣು ಕುಣಿಕೆ ಬಿಚ್ಚಿ ಆಸ್ಪತ್ರೆಗೆ ಕೊಂಡೊಯ್ದರೂ, ಆ ವೇಳೆಗಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.