ದೇಶದಲ್ಲಿ ಶರಿಯಾ ಕಾನೂನು ಜಾರಿಗೆ ಮತೀಯ ಸಂಘಟನೆಗಳು ಆಗ್ರಹಿಸುತ್ತಿರುವ ಹೊತ್ತಿನಲ್ಲೇ, ಬಾಂಗ್ಲಾದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಗುರಿಯಾಗಿಸಿ ಗುಂಪೊಂದು ದಾಳಿ ನಡೆಸಿದೆ.
ಢಾಕಾ: ದೇಶದಲ್ಲಿ ಶರಿಯಾ ಕಾನೂನು ಜಾರಿಗೆ ಮತೀಯ ಸಂಘಟನೆಗಳು ಆಗ್ರಹಿಸುತ್ತಿರುವ ಹೊತ್ತಿನಲ್ಲೇ, ಬಾಂಗ್ಲಾದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಗುರಿಯಾಗಿಸಿ ಗುಂಪೊಂದು ದಾಳಿ ನಡೆಸಿದೆ. ಶಾಲೆಯೊಂದರ ಮೇಲೆ ನಡೆಸಿದ ಈ ದಾಳಿಯಲ್ಲಿ ಕನಿಷ್ಠ 24 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶರಿಯಾ ಕಾನೂನು ಜಾರಿಯಲ್ಲಿರುವ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲೂ ಹೀಗೆ ಕಲೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಧರ್ಮದ ಹೆಸರಲ್ಲಿ ನಿಷೇಧಿಸಲಾಗಿತ್ತು. ಇದೀಗ ಬಾಂಗ್ಲಾದಲ್ಲೂ ಅಂಥದ್ದೇ ಘಟನೆ ನಡೆದಿದೆ.
ಆಗಿದ್ದೇನು?:
ಫರೀದ್‌ಪುರದ ಜಿಲ್ಲಾ ಶಾಲೆಯ 185ನೇ ವಾರ್ಷಿಕೋತ್ಸವದ ನಿಮಿತ್ತ ಬಾಂಗ್ಲಾದ ಪ್ರಖ್ಯಾತ ರಾಕ್ ಗಾಯಕ ಜೇಮ್ಸ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಲಿವುಡ್‌ನಲ್ಲಿ ಗ್ಯಾಂಗ್‌ಸ್ಟರ್, ವೋ ಲಮ್ಹೆ, ಲೀಫ್ ಇನ್ ಅ ಮೆಟ್ರೋ ಸೇರಿ ಹಲವು ಬಾಲಿವುಡ್ ಚಿತ್ರಗಳಿಗೂ ಹಾಡಿದ್ದಾರೆ. ಶುಕ್ರವಾರ ರಾತ್ರಿ ಶಾಲೆಯ ಆವರಣದಲ್ಲಿ ಇವರ ಕಾರ್ಯಕ್ರಮ ನಡೆಯಬೇಕಿತ್ತು. ಈ ವೇಳೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆದು ವೇದಿಕೆ ಧ್ವಂಸಕ್ಕೆ ಮುಂದಾಗಿದ್ದಾರೆ. ಇವರನ್ನು ತಡೆಯಲೆತ್ನಿಸಿದ ವಿದ್ಯಾರ್ಥಿಗಳ ಮೇಲೂ ಹಲ್ಲೆ ಮಾಡಿದ್ದಾರೆ. ದಾಂಧಲೆಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ನಂತರ ಜಿಲ್ಲಾಡಳಿತದ ಆದೇಶದಂತೆ ಕಾರ್ಯಕ್ರಮ ರದ್ದುಪಡಿಸಲಾಗಿದೆ.
ಹಲವು ಕಾರ್ಯಕ್ರಮ ರದ್ದು:
ಇತ್ತೀಚೆಗೆ ಛಾಯಾನೌತ್‌ನ ಸಾಂಸ್ಕೃತಿಕ ಕೇಂದ್ರ ಹಾಗೂ ಸಂಗೀತ, ನಾಟಕ, ಜಾನಪದ ಕೇಂದ್ರವಾದ ಉದಿಚಿ ಸಂಸ್ಥೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಕೆಲ ದಿನಗಳ ಹಿಂದೆ ಭಾರತದ ಖ್ಯಾತ ಗಾಯಕ ಸಿರಾಜ್ ಅಲಿ ಖಾನ್ ಕಾರ್ಯಕ್ರಮಕ್ಕಾಗಿ ಢಾಕಾಕ್ಕೆ ತೆರಳಿದ್ದರು. ಆದರೆ ಅಲ್ಲಿನ ಪರಿಸ್ಥಿತಿ ಸುರಕ್ಷಿತವಾಗಿಲ್ಲದ ಕಾರಣ ದೇಶಕ್ಕೆ ವಾಪಸಾಗಿದ್ದರು. 2 ದಿನಗಳ ಹಿಂದೆ, ಉಸ್ತಾದ್ ರಶೀದ್ ಖಾನ್ ಅವರ ಪುತ್ರ ಅರ್ಮಾನ್ ಖಾನ್ ಕೂಡ ಢಾಕಾ ಆಹ್ವಾನವನ್ನು ನಿರಾಕರಿಸಿದ್ದರು. ಸಂಗೀತ ದ್ವೇಷಿ ಜಿಹಾದಿಗಳು ವಾಸಿಸುವ ಬಾಂಗ್ಲಾದೇಶಕ್ಕೆ ಕಾಲಿಡಲು ತಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.