ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹವು ನಡೆಸಿದ ಎನ್ನಲಾದ ಕಲ್ಲಿದ್ದಲು ಹಗರಣ ಕುರಿತ ವಿಚಾರಣೆಯನ್ನು ತ್ವರಿತವಾಗಿ ಮುಗಿಸುವಂತೆ 21 ಅಂತಾರಾಷ್ಟ್ರೀಯ ಸಂಘಟನೆಗಳು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಪತ್ರ ಬರೆದು ಮನವಿ ಮಾಡಿವೆ.

ನವದೆಹಲಿ: ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹವು ನಡೆಸಿದ ಎನ್ನಲಾದ ಕಲ್ಲಿದ್ದಲು ಹಗರಣ ಕುರಿತ ವಿಚಾರಣೆಯನ್ನು ತ್ವರಿತವಾಗಿ ಮುಗಿಸುವಂತೆ 21 ಅಂತಾರಾಷ್ಟ್ರೀಯ ಸಂಘಟನೆಗಳು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಪತ್ರ ಬರೆದು ಮನವಿ ಮಾಡಿವೆ.

ಅದಾನಿ ಸಮೂಹವು, 2014ರಲ್ಲಿ ಇಂಡೋನೇಷ್ಯಾದಿಂದ ಕಡಿಮೆ ಗುಣಮಟ್ಟದ ಕಲ್ಲಿದ್ದಲು ಆಮದು ಮಾಡಿಕೊಂಡು ಅದನ್ನು ಉತ್ಕೃಷ್ಟ ಗುಣಮಟ್ಟದ್ದು ಎಂದು ಹಲವು ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ 3 ಪಟ್ಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಸಾವಿರಾರು ಕೋಟಿ ರು. ಲಾಭ ಮಾಡಿತ್ತು ಎಂದು ಇತ್ತೀಚೆಗೆ ಲಂಡನ್‌ ಮೂಲಕ ಫೈನಾನ್ಷಿಯಲ್‌ ಟೈಮ್ಸ್‌ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಈ ಪತ್ರ ಬರೆಯಲಾಗಿದೆ.

ಈ ಹಿಂದೆ ಅದಾನಿ ಸಮೂಹದ ವಿರುದ್ಧ ಭಾರೀ ಗೋಲ್‌ಮಾಲ್‌ನ ಆರೋಪ ಮಾಡಿದ್ದ ಅಮೆರಿಕ ಉದ್ಯಮಿ ಜಾರ್ಜ್‌ ಸೋರಸ್‌ ನೇತೃತ್ವದ ಆರ್ಗನೈಸ್ಡ್‌ ಕ್ರೈಮ್‌ ಆ್ಯಂಡ್‌ ಕರಪ್ಷನ್‌ ರಿಪೋರ್ಟಿಂಗ್‌ ಪ್ರಾಜೆಕ್ಟ್‌ ತನ್ನ ವರದಿಯಲ್ಲಿ ಅದಾನಿ ಸಮೂಹದ ವಿರುದ್ಧ ಈ ಅಕ್ರಮದ ಆರೋಪ ಮಾಡಿದೆ.

ಅದಾನಿ ಸಮೂಹದ ಕಲ್ಲಿದ್ದಲು ಹಗರಣದ ವಿರುದ್ಧ ಕೇಂದ್ರ ಕಂದಾಯ ಗುಪ್ತಚರ ಇಲಾಖೆ ಸಲ್ಲಿಸಿದ್ದ ಕೇಸನ್ನು ಬಾಂಬೆ ಹೈಕೋರ್ಟ್‌ ಈ ಹಿಂದೆ ವಜಾ ಮಾಡಿತ್ತು. ಅದನ್ನು ಇಲಾಖೆ 2019ರಲ್ಲೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೂ ಅದರ ಕುರಿತು ವಿಚಾರಣೆ ಆರಂಭವಾಗಿಲ್ಲ.